ಹಳಗನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಳಗನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮೇ 16, 2024

ಹಳಗನ್ನಡ ಅರ್ಥಕೋಶ

ಕನ್ನಡ ನುಡಿಯ ಹಿನ್ನಡವಳಿಯಲ್ಲಿ ಹಲವು ಹಲವು ಕನ್ನಡದ್ದೇ ಒರೆಗಳು ದೊರೆಯುತ್ತವೆ. ಈ ಹೊತ್ತಿನಲ್ಲಿ ಕೆಲವು ಬಳಕೆಯಿಂದ ಬಿದ್ದು ಹೋಗಿರಬಹುದು. ಇಂತಹ ಹೊತ್ತಗೆಗಳ ನೆರವಿನಿಂದ ಅವುಗಳ ಕುರಿತು ತಿಳಿದುಕೊಳ್ಳಬಹುದು. 

"ಹಳಗನ್ನಡ ಅರ್ಥಕೋಶ" ಓದುಗೆಯಿಂದ ಕೆಲವು ಕನ್ನಡದ್ದೇ ಒರೆಗಳ ಪಟ್ಟಿಯಿಲ್ಲಿದೆ :- 

೧. ಅಟ್ಟಟ್ಟಿ - ದೂತ, ಓಲೆಕಾರ

೨. ಅಡಕಿಲ್ - ರಾಶಿ

೩. ಅಱಿ(ರಿ)ಲ್ - ನಕ್ಶತ್ರ

೪. ಅರ‍್ಬಿ - ಜಲಪಾತ

೫. ಅಲ್ಲರ - ವಿರಹ

೬. ಆಗಡು - ಆ ಸಮಯ

೭. ಆಱ(ರ)ಡಿ - ಲೂಟಿ, ದುಂಬಿ

೮. ಇಂಬು - ಆಶ್ರಯ, ಅವಕಾಶ

೯. ಈರಯ್ದು - ಹತ್ತು 

೧೦. ಉಕ್ಕೆವ - ಮೋಸ

೧೧. ಉಬ್ಬುಗೊಬ್ಬು - ಅದಿಕ ಗರ್ವ

೧೨. ಎಕ್ಕಸಕ್ಕ - ಅಸಂಬದ್ದ ಮಾತು

೧೩. ಎಣೆ - ಸಾಟಿ, ಸಮ

೧೩. ಎಸಕ - ಕೆಲಸ, ವ್ಯವಹಾರ

೧೪. ಒಣರ್ - ಬಾವಿಸು

೧೫. ಕಡುಪಗಲ್ - ಮದ್ಯಾಹ್ನ

೧೬. ಕಾದಲ್ - ಪ್ರೀತಿ 

೧೭. ಕಿಸುವೊನ್ - ತಾಮ್ರ

೧೮. ಗೆಲ್ಲವೆಣ್ - ಜಯಲಕ್ಶ್ಮೀ

೧೯. ಚೆಂಬಿಸಿಲ - ನೇಸರ

೨೦. ಜಾಡು - ಗುರುತು, ಸುಳಿವು

೨೧. ಜೇನುಣಿ - ಜೇನು ನೊಣ

೨೨. ತುೞಿ(ಳಿ)ಲ್ - ನಮಸ್ಕಾರ

೨೩. ತೊರಳೆ - ಗುಲ್ಮ, spleen

೨೪. ದೂಸರ್ - ಕಾರಣ

೨೫. ನೋಂಪಿ - ವ್ರತ

೨೬. ಪೊೞ್ತು(ಳ್ತು) - ಹೊತ್ತು

೨೭. ಪೊೞ(ಳ)ಲ್ - ನಗರ, ಪ್ರತಿದ್ವನಿ

೨೮. ಪೊೞೆ(ಳೆ) - ಹೊಳೆ, ನದಿ

೨೯. ಪೂಣ್ಕೆ - ಶಪತ

೩೦. ಬಯ್ಗು - ಸಂಜೆ

೩೧. ಬಿದ್ದಿನ - ಅತಿತಿ

೩೨. ಬೆಳಕಂಡಿ - ಕಿಟಿಕಿ

೩೩. ಮುನ್ನೀರ್ - ಸಮುದ್ರ

೩೪. ಮೇಲ್ಮೆ - ಗನತೆ

೩೫. ಸೊಡರು - ದೀಪ

೩೬. ಹೊರಜೆ - ಹಗ್ಗ

ಈ ಹೊತ್ತಗೆಯನ್ನು ನಾವು ಇಲ್ಲಿಂದ ಕೊಳ್ಳಬಹುದು :- ಹಳಗನ್ನಡ ಅರ್ಥಕೋಶ

ಶನಿವಾರ, ಜನವರಿ 6, 2024

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಹೊತ್ತಗೆಗಳ ಓದು

ಕನ್ನಡ ನುಡಿಯರಿಮೆ, ಸೊಲ್ಲರಿಮೆ ಸಲುವಾಗಿ ಹಲವು ಓದುಗೆಗಳನ್ನು ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರು ಬರೆದಿದ್ದಾರೆ. ಅವರ ಹೊತ್ತಗೆಗಳನ್ನು ಯಾವ ಓರಣದಲ್ಲಿ ಓದಬೇಕೆಂಬ ಕೇಳ್ವಿ ಆಗಾಗ ಮೂಡುತ್ತದೆ, ಅದರ ಸಲುವಾಗಿ ಈ ಬರಹ ಬರೆದಿದ್ದೇನೆ. ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹಲವು ಓದುಗೆಗಳನ್ನು ಹಲವು ಓರಣ(ಕ್ರಮ)ಗಳಲ್ಲಿ ಓದಬಹುದು, ಅದರಲ್ಲಿ ಒಂದು ಓರಣ ಈ ಬರಹದಲ್ಲಿ ತಿಳಿಸಲಾಗುವುದು. 

ಹಿರಿಯರ ಬಗ್ಗೆ ಇತ್ತೀಚಗಶ್ಟೇ ಗೊತ್ತಾಗಿದೆ, ಎಲ್ಲಿಂದ ತೊಡಗುವುದೆಂದು ಕೇಳ್ವಿ ಮೂಡುವುದು ಸರಿ, ಅದಕ್ಕೆ ಮಾರ‍್ನುಡಿ ಇಲ್ಲಿದೆ :-

ಮೊದಲ ಹೆಜ್ಜೆಗಳಿಗೆ ಈ ಹೊತ್ತಗೆಗಳನ್ನು ಓದಬಹುದು :- 

೧. ನುಡಿಯ ಬಗೆಗೆ ನೀವೇನು ಬಲ್ಲಿರಿ ?  

೨. ಕನ್ನಡ ನುಡಿಯರಿಮೆಯ ಇಣುಕುನೋಟ

೩. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

೪. ಮಾತಿನ ಒಳಗುಟ್ಟು

೫. ಮಾತು ಮತ್ತು ಬರಹದ ನಡುವಿನ ಗೊಂದಲ

ಮೇಲಿನ ಹೊತ್ತಗೆಗಳನ್ನು ಓದಿದ ಮೇಲೆ ಪದಕಟ್ಟಣೆಯಲ್ಲಿ ಮುಂದುವರೆಯಲು ಬಯಸಿದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

ಪದಕಟ್ಟಣೆ ಜೊತೆ ಕನ್ನಡದ್ದೇ ಒರೆಗಳು ತಿಳಿದುಕೊಳ್ಳವ ಹಂಬಲವಿದ್ದರೆ ಈ ಕೆಳಗಿನ ಹೊತ್ತಗೆಗಳನ್ನು ಬಳಸಬಹುದು :-

೭. ಇಂಗ್ಲಿಶ್-ಕನ್ನಡ ಪದನೆರಕೆ

೮. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು 

ಸೊಲ್ಲರಿಮೆ(ವ್ಯಾಕರಣ) ಕವಲಿನಲ್ಲಿ ಮುಂದುವರೆಯಲು ಬಯಸಿದರೆ ಈ ಹೊತ್ತಗೆಗಳನ್ನು ಓದಬಹುದು :- 

೬. ಕನ್ನಡ ವ್ಯಾಕರಣ ಯಾಕೆ ಬೇಕು ? 

೭. ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ

೮. ಕನ್ನಡ ಬರಹದ ಸೊಲ್ಲರಿಮೆ - ೧ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೯. ಕನ್ನಡ ಬರಹದ ಸೊಲ್ಲರಿಮೆ - ೨ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೦. ಕನ್ನಡ ಬರಹದ ಸೊಲ್ಲರಿಮೆ - ೩ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೧. ಕನ್ನಡ ಬರಹದ ಸೊಲ್ಲರಿಮೆ - ೪ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೨. ಕನ್ನಡ ಬರಹದ ಸೊಲ್ಲರಿಮೆ - ೫ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೩. ಕನ್ನಡ ಬರಹದ ಸೊಲ್ಲರಿಮೆ - ೬ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೪. ಕನ್ನಡ ಬರಹದ ಸೊಲ್ಲರಿಮೆ - ೭ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೫. ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು

ಹವ್ಯಕ ಕನ್ನಡ ಕುರಿತು ತಿಳಿದುಕೊಳ್ಳುವ ಬಯಕೆಯಿದ್ದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಹವ್ಯಕ ಕನ್ನಡ  

ಹಳೆಗನ್ನಡದಿಂದ ಈಗಿನ ಕನ್ನಡದ ತನಕ ನಡೆದಿರುವ ಮಾರ‍್ಪಾಟುಗಳ ಜೊತೆ ಹಳೆಗನ್ನಡ ಸೊಲ್ಲರಿಮೆ ಕುರಿತು ತಿಳಿದುಕೊಳ್ಳುವ ಹಂಬಲಕ್ಕೆ ಈ ಹೊತ್ತಗೆಗಳನ್ನು ಓದಬಹುದು :-

೬. ಕನ್ನಡ ನುಡಿ ನಡೆದು ಬಂದ ದಾರಿ

೭. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು ?

ಕನ್ನಡ ಬರಹಗಳಲ್ಲಿ ಕಾಣುವ ಬರಹದ ಗೊಂದಲಗಳು, ಪದಬಳಕೆ ಗೊಂದಲಗಳ ಕುರಿತು ಆಳವಾಗಿ ತಿಳಿದುಕೊಳ್ಳಲು ಬಯಸಿದರೆ ಈ ಹೊತ್ತಗೆ ಓದಬಹುದು :-

೬. ಕನ್ನಡ ಬರಹವನ್ನು ಸರಿಪಡಿಸೋಣ 

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹೊತ್ತಗೆಗಳನ್ನು ಇಲ್ಲಿಂದ ಕೊಳ್ಳಬಹುದು :- https://harivubooks.com/collections/dn-shankara-bhat-kannada-books

ಮಂಗಳವಾರ, ಆಗಸ್ಟ್ 15, 2023

ಮರೆತಿರುವ ಹಳೆಗನ್ನಡ ಪದ "ಪುಳ್"

ಕನ್ನಡಕ್ಕೆ ಒಂದು ನಿಡಿದಾದ ಹಿನ್ನಡವಳಿಯಿದೆ ಎಂದು ಆಗಾಗ ನಮ್ಮ ಕಿವಿಗೆ ಬೀಳುವ ಮಾತುಗಳು. ಕನ್ನಡವನ್ನು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ಹೆಚ್ಚಾಗಿ ಗುಂಪಿಸುವುದರ ಕುರಿತು ಗೊತ್ತು. ಆದರೆ ಹಿಂದಿನ ಕನ್ನಡ ಇಲ್ಲವೇ ಹಳೆಗನ್ನಡದಲ್ಲಿರುವ ಕೆಲವು ಕನ್ನಡದ್ದೇ ಒರೆಗಳು ನಾವು ಹೆಚ್ಚುಕಡಿಮೆ ಕೇಳಿರುವುದಿಲ್ಲ. ಒಂದು ಎತ್ತುಗೆ :- "ಪುಳ್"

ಹಾಗಾದರೆ ಈ ಒರೆಯ ಹುರುಳೇನು ? ಈ ಒರೆಯ ಹುರುಳು "ಹಕ್ಕಿ ಇಲ್ಲವೇ ಪಕ್ಶಿ". ಹಿಂದೆ ಹಿರಿಯರಾದ ಡಿ.ಎಲ್.ನರಸಿಂಹಾಚಾರ್ ಅವರ "ಪೀಠಿಕೆಗಳು ಲೇಖನಗಳು" ಹೊತ್ತಗೆಯಲ್ಲಿ "ಪಕ್ಷಿ < ಹಕ್ಕಿಗೆ ಸಮಾನ ಕನ್ನಡ ಶಬ್ದ" ಅಂಕಣದಲ್ಲಿ ಇದರ ಕುರಿತು ಹೆಚ್ಚು ಬೆಳಕು ಚೆಲ್ಲುತ್ತದೆ. 

ಈ ಅಂಕಣದಲ್ಲಿ ಪುಳ್ ಒರೆ ಬಳಕೆ ಕುರಿತು ಹಲವು ಎತ್ತುಗೆಗಳಿವೆ, ಅದರಲ್ಲಿ "ಕವಿರಾಜಮಾರ್ಗ"ದಲ್ಲಿ ಆಗಿರುವ ಬಳಕೆ ಒಂದೆತ್ತುಗೆ. ಡಾ || ಪಿ.ವಿ.ನಾರಾಯಣ ಅವರ "ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥಸಂಕಲನ - ಪ್ರಯೋಗಗಳೊಂದಿಗೆ)" ಹೊತ್ತಗೆಯಲ್ಲಿ "ಪುಳ್" ಒರೆ ಜೊತೆ ಕವಿರಾಜಮಾರ್ಗದಲ್ಲಿ ಆಗಿರುವ ಬಳಕೆ ನೀಡಿದ್ದಾರೆ, ಅದರ ತಿಟ್ಟ ಇಲ್ಲಿದೆ :- 


ಹಳೆಗನ್ನಡದ "ಪುಳ್" ಈಗಿನ ಕನ್ನಡದಲ್ಲಿ "ಪುಳ್ಳು" ಇಲ್ಲ "ಹುಳ್ಳು" ಆಗುತ್ತದೆ (ಹಳೆಗನ್ನಡದ ಪುಲ್ ಹೊಸಗನ್ನಡದಲ್ಲಿ "ಹುಲ್ಲು" ಆಗಿರುವ ಹಾಗೆ). ಹೀಗೆ ಹಳೆಗನ್ನಡದಲ್ಲಿ ಬಳಕೆಯಾಗಿರುವ ಹಲವು ಕನ್ನಡದ್ದೇ ಒರೆಗಳು ನಾವು ಈಗ ಬಳಸುತ್ತಿಲ್ಲ, ಸರಿ. ಆದರೆ ಕನ್ನಡದ್ದೇ ಒರೆಯಿಲ್ಲವೆಂಬ ತೀರ‍್ಮಾನಕ್ಕೆ ಬರುವ ಮುನ್ನ ಹಳೆಗನ್ನಡದ ಬರಹಗಳು, ಕಲ್ಬರಹಗಳು ಮುಂತಾದವುಗಳ ನೆರವು ಪಡೆಯೋಣ. ಮುಂದಕ್ಕೆ ಕನ್ನಡದಲ್ಲಿ ಇಂತಹ ಒರೆಗಳು ಬಳಸಬಹುದು ಹಾಗೂ ಪದಕಟ್ಟಣೆ ಕೆಲಸದಲ್ಲು ಈ ಒರೆಗಳ ನೆರವು ಪಡೆಯಬಹುದು. ಒಟ್ಟಿನಲ್ಲಿ ಕನ್ನಡ ನುಡಿ ಆಳ, ಆಗಲ ಒಮ್ಮೊಮ್ಮೆ ಬೆರಗು ಮೂಡಿಸುವುದರಲ್ಲಿ ಎರಡು ಮಾತಿಲ್ಲ.  

ಶನಿವಾರ, ಆಗಸ್ಟ್ 12, 2023

ಕನ್ನಡದಲ್ಲಿ ಪದಕಟ್ಟಣೆ - ಹಳೆಗನ್ನಡ ನೆರವು

ಹಿಂದಿನ ಬರಹದಲ್ಲಿ ನೋಡಿದ ಹಾಗೆ ಕನ್ನಡದಲ್ಲಿ ಪದಕಟ್ಟಣೆಗೆ ಒಂದು ಹಿನ್ನಡವಳಿಯೇ ಇದೆ. ಪದಕಟ್ಟಣೆ ಕೆಲಸ ನಿಲ್ಲದ ಕೆಲಸವೆಂದು ಅದರಿಂದ ತಿಳಿಯುತ್ತದೆ. ಕನ್ನಡದಲ್ಲಿ  ಪದಕಟ್ಟಣೆಗೆ ಏನೇನು ಬೇಕೆಂದು ಹಲವು ಸಲ ನಮ್ಮಲ್ಲಿ ಕೇಳ್ವಿ ಮೂಡುತ್ತದೆ. ಪದಕಟ್ಟಣೆಗೆ ಬೇರುಪದಗಳು, ಹಿನ್ನೊಟ್ಟುಗಳು(Suffixes), ಪದಬಗೆಗಳು ಇವೆಲ್ಲವೂ ಬೇಕಾಗುತ್ತದೆ. ಇದರಲ್ಲಿ ಬೇರುಪದಗಳು ಹಾಗು ಪದಬಗೆಗಳನ್ನು ಬಳಸಿ ಕನ್ನಡದಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಕಟ್ಟಬಹುದು. 

ಈಗಿರುವ ಕನ್ನಡದ್ದೇ ಒರೆಗಳ ಹುಡುಕಾಟದಲ್ಲಿ ನಾವು ಹಳೆಗನ್ನಡ ಒರೆಗಳ ನೆರವು ಪಡೆಯಬಹುದು, ನೆನಪಿರಲಿ ಹಳೆಗನ್ನಡ ಒರೆಗಳ ನೆರವು ಹೊರತು ಹಳೆಗನ್ನಡ ಒರೆಗಳನ್ನೇ ಹಾಗೆ ಬಳಸಬೇಕೆಂಬ ಕಟ್ಟುಪಾಡಲ್ಲ. ಇಲ್ಲಿ ಒಂದು ಎತ್ತುಗೆ ನೀಡುವೆ, ಹಳಗನ್ನಡದಲ್ಲಿ ಪೊೞ(ಳ)ಲ್ ಎಂಬ ಒರೆಯಿದೆ, ಇದಕ್ಕೆ ನಗರ, ಊರು ಎಂಬ ಒಂದು ಹುರುಳಿದೆ. ಈಗಿನ ಕನ್ನಡ ಇಲ್ಲ ಬರಹಕನ್ನಡದಲ್ಲಿ ಅದು ಹೊಳಲು ಆಗುತ್ತದೆ. ಪದಕಟ್ಟಣೆಗೆ ಪೊೞಲ್ ನೆರವು ಪಡೆದುಕೊಂಡು ಈಗಿನ ಕನ್ನಡದಲ್ಲಿರುವ ಹೊಳಲು ಬಳಸಿ ಕನ್ನಡ ಒರೆ ಕಟ್ಟಬಹುದು. ಹೊಳಲು ಬಳಸಿ ಹೊಳಲಾಳ್ವಿಕೆ (ಹೊಳಲು + ಆಳ್ವಿಕೆ), ಇದು ಊರಿನ ಆಡಳಿತವೆಂದು ತಿಳಿಸುವ ಒಂದು ಒರೆ ಕಟ್ಟಬಹುದು. ಹೀಗೆ ಹಲವು ಕನ್ನಡ ಒರೆಗಳನ್ನು ನಾವು ಕಟ್ಟಬಹುದು. ಇದೇ ಬಗೆಯಲ್ಲಿ ಹಲವು ಎತ್ತುಗೆಗಳನ್ನು ನಾನು ನೀಡಬಲ್ಲೆ.

ಹೀಗೆ ಹಳೆಗನ್ನಡದ ಒರೆಗಳ ನೆರವಿನಿಂದ ಹಲವು ಕನ್ನಡದ್ದೇ ಒರೆ ಕಟ್ಟಬಹುದು. ಇದೆಲ್ಲ ಬರೆಯುವಾಗ ನನಗೆ ನೆನಪಿಗೆ ಬರುವ ಹೊತ್ತಗೆಯೇ "ಕನ್ನಡ ಬರಹವನ್ನು ಸರಿಪಡಿಸೋಣ", ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಈ ಕೆಲಸ ನೆನಪು ಮಾಡಲೇ ಬೇಕು. ಇತ್ತೀಚಗೆ ತಿದ್ದಿದ, ಮೂರನೆ ಅಚ್ಚು ಕಂಡ ಈ ಹೊತ್ತಗೆ ಬಿಡುಗಡೆಯಾಯಿತು. ಹೊತ್ತಗೆ ಮುಂಬದಿ ತಿಟ್ಟ ಇಲ್ಲಿದೆ :- 



ಕನ್ನಡ ಬರಹವನ್ನು ಸರಿಪಡಿಸೋಣ ಓದುಗೆ ಇಲ್ಲಿಂದ ನಾವು ಕೊಳ್ಳಬಹುದು :- https://harivubooks.com/products/kannada-barahavannu-saripadisona 

ಶುಕ್ರವಾರ, ಆಗಸ್ಟ್ 11, 2023

ಅಂತಿಗೊನೆ - ಕನ್ನಡದ್ದೇ ಒರೆಗಳ ಕಣಜ

ಸೊಪೊಕ್ಲೇಸ್ ಅವರ ಗ್ರೀಕ್ ಆಡುಗಬ್ಬ "ಅಂತಿಗೊನೆ"ಯನ್ನು ಕನ್ನಡಿಸಿದ್ದು ಕ.ವೆಂ.ರಾಘವಾಚಾರ್ ಅವರು. ಇದು ೧೯೫೬ ಏಡಿನಲ್ಲಿ ಬಿಡುಗಡೆಯಾಯಿತು. ಹೊತ್ತಗೆಯ ಹೆಚ್ಚಿನ ಕುರಿಪು ಈ ಕೆಳಗಿನ ತಿಟ್ಟದಲ್ಲಿದೆ. 



ಈ ಓದುಗೆಯ ಮುನ್ನುಡಿ ನೋಡಿದರೆ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ, ಎತ್ತುಗೆ :- ಅರಿಕೆ, ಕಾಣಿಕೆಯೊಪ್ಪಿಕೆ, ಕಡೆನೆನಪು. ಮುನ್ನುಡಿ ಓದುವಾಗ ತಿಳಿಯುತ್ತದೆ ಕನ್ನಡಿಸುವಾಗ ಇದನ್ನು ಹಳೆಗನ್ನಡದಲ್ಲಿ ಕನ್ನಡಿಸಿದ್ದಾರೆ ಎಂದು. ಇದನ್ನು ಓದುವಾಗ ಹಳೆಗನ್ನಡದ ಹಲವು ಕನ್ನಡದ್ದೇ ಒರೆಗಳು ನಮ್ಮ ಗಮನ ಸೆಳೆಯುತ್ತದೆ, ಅದರಲ್ಲಿ ಒಂದು "ಕೋಯಿಲ್(ಲು)", ಹಿಂದೆ ಕೆಲವು ಕನ್ನಡ ಕಲ್ಬರಹಗಳಲ್ಲಿ ಈ ಒರೆ ಬಳಕೆಯಾಗಿದೆ, ಇದರ ಹುರುಳು ಗುಡಿ ಇಲ್ಲ ದೇವಸ್ಥಾನ. ಹೊತ್ತಗೆಯಲ್ಲಿ ಈ ಒರೆ ಬಳಕೆಯಾಗಿರುವ ಹಾಳೆಬದಿಯ ತಿಟ್ಟ ಇಲ್ಲಿದೆ :- 


ಹೀಗೆ ಈ ಹೊತ್ತಗೆ ನೋಡಿದರೆ ಹಲವು ಹಲವು ಕನ್ನಡದ್ದೇ ಒರೆಗಳು ದೊರೆಯುತ್ತವೆ ಮತ್ತು ಹೊತ್ತಗೆ ಕೊನೆಯಲ್ಲಿ ಒರೆಪಟ್ಟಿ ಕೂಡ ನೀಡಲಾಗಿದೆ. ಇಲ್ಲು ಕೂಡ ಹಲವು ಕನ್ನಡದ್ದೇ ಒರೆಗಳು ಸಿಗುತ್ತವೆ, ಕೆಲವು ಎತ್ತುಗೆಗಳು :-

ಅಱಂ (ಧರ್ಮ)
ಉಸಿರಿ (ಪ್ರಾಣಿ) 
ಎಣೆ (ಸಮ) 
ಎಸಕಂ (ಕೆಲಸ)
ಒಣರ್ (ಭಾವಿಸು)
ಕಾಣ್ಕೆ (ದರ್ಶನ)
ನೀರುಸಿರಿ (ನೀರು ಪ್ರಾಣಿ) 
ಪೂಣ್ (ಪ್ರತಿಜ್ಞೆಮಾಡಿ (ಕೈಗೊಳ್ಳು))
ಪೊೞ್ತು(ಳ್ತು) (ಹೊತ್ತು, ನೇಸರು)
ಬೇಳ್‍ಕಟ್ಟೆ (ಹೋಮಕುಂಡ) 
ಮಸಗು (ಕೆರಳು, ಉಕ್ಕು) 
ಮಾಱಾ(ರಾ)ಡು (ಅದಲು ಬದಲು ಮಾಡು)

ಈ ಹೊತ್ತಗೆಯನ್ನು ಇಲ್ಲಿಂದ ಇಳಿಸಿಕೊಳ್ಳಬಹುದು :- https://archive.org/details/anthigone0000soph  

ಬುಧವಾರ, ಮಾರ್ಚ್ 16, 2022

ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥಸಂಕಲನ - ಪ್ರಯೋಗಗಳೊಂದಿಗೆ)

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ, ಇದರಲ್ಲಿ ನಾವು ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಕುರಿತು ಕೇಳಿರುತ್ತೇವೆ. ಆದರೆ ಕನ್ನಡದಲ್ಲಿ ಹಿಂದೆ ಬಳಕೆಯಾದ ಒರೆಗಳ ಕುರಿತು ತಿಳಿದುಕೊಳ್ಳಲು ನೆರವಾಗುವ ಒಂದು ಹೊತ್ತಗೆ "ಚಂಪೂ ನುಡಿಗನ್ನಡಿ". ಇದನ್ನು ಬರೆದವರು ಡಾ || ಪಿ.ವಿ.ನಾರಾಯಣ. ಈ ಹೊತ್ತಗೆಯಲ್ಲಿ ಒರೆಗಳ ಹುರುಳು ಜೊತೆ ಅವುಗಳ ಬಳಕೆ ಕೂಡ ದೊರೆಯುತ್ತದೆ. ಹೊತ್ತಗೆ ಹೊದಿಕೆಪುಟದ ತಿಟ್ಟ ಇಲ್ಲಿದೆ :- 


ಕನ್ನಡದಲ್ಲಿ ಹಿಂದಿನಿಂದಲು ಹಲವು ಬರಹಗಾರರ ಹಲವು ಬರಹಗಳ ಕೊಡುಗೆಯಿದೆ. ಚಂಪೂ ನುಡಿಗನ್ನಡಿ ಹೊತ್ತಗೆಯಲ್ಲಿ ತಿಳಿಸಿರುವ ಒರೆಬಳಕೆ ಯಾವ ಬರಹಗಳಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಯಲು ಆ ಬರಹಗಳ ಪಟ್ಟಿಯ ತಿಟ್ಟ ಇಲ್ಲಿದೆ :- 



ಈ ಹೊತ್ತಗೆಯಲ್ಲಿ ಹಲವು ಹಲವು ಕನ್ನಡ ಒರೆಗಳು ದೊರೆಯುವ ಜೊತೆಗೆ ಕೆಲವು ಒರೆಗಳನ್ನು ನೋಡಿದರೆ ಬೆರಗು ಮೂಡುತ್ತದೆ. ಎಲ್ಲ ಒರೆಗಳಿಗೆ ಹುರುಳು ಜೊತೆ ಹಿಂದೆ ಯಾವ ಬರಹದಲ್ಲಿ ಬಳಕೆಯಾಗಿತ್ತೆಂದು ತಿಳಿಸಲಾಗಿದೆ. ಬೆರಗು ಮೂಡಿಸುವ ಒಂದು ಎತ್ತುಗೆ ಎಂದರೆ ಅದು "ಕಾದಲ್" ಬೇರು ಒರೆಯಿಂದ ದೊರೆತಿರುವ "ಕಾದಲ, ಕಾದಲಳ್, ಕಾದಲಿಸು, ಕಾದಲೆ ಮತ್ತು ಕಾದಲ್ಮೆ" ಒರೆಗಳು. ಈ ಎಲ್ಲ ಒರೆಗಳ ಹುರುಳು, ಬಳಕೆ ಹೊತ್ತಗೆಯಲ್ಲಿದೆ, ಈ ಎಲ್ಲ ಒರೆಗಳು ಕನ್ನಡದ್ದೇ ! ಇದರ ತಿಟ್ಟ ಇಲ್ಲಿದೆ :- 


ಭಾನುವಾರ, ಫೆಬ್ರವರಿ 13, 2022

ಹಳಗನ್ನಡ ಶಬ್ದಾರ್ಥಕೋಶ

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಹಲವು ಕನ್ನಡದ್ದೇ ಪದಗಳು ಬಳಕೆಯಾಗಿವೆ. ಅದರಲ್ಲಿ ಕೆಲವು ಬಳಕೆಯಿಂದ ಬಿದ್ದು ಹೋಗಿವೆ ಹಾಗು ಇನ್ನು ಕೆಲವು ಬಳಕೆಯಲ್ಲಿವೆ. ಹಿಂದೆ ಕನ್ನಡದಲ್ಲಿ ಈ ಹಲವು ಕನ್ನಡದ್ದೇ ಪದಗಳು ಬಳಕೆಯಾಗಿದ್ದವು. ಇಂತಹ ಪದಗಳನ್ನು ನಾವು "ಹಳಗನ್ನಡ ಶಬ್ದಾರ್ಥಕೋಶ" ಹೊತ್ತಗೆಯಲ್ಲಿ ನೋಡಬಹುದು. ಈ ಹೊತ್ತಗೆಯಲ್ಲಿ ದೊರೆಯುವ ಕೆಲವು ಕನ್ನಡದ್ದೇ ಒರೆಗಳ ಎತ್ತುಗೆಗಳು ಇಲ್ಲಿವೆ :- 

ಅಗುೞ್ಚು(ಳ್ಚು) - ಮುಳುಗಿಸು

ಅರ‍್ಬಿ - ಜಲಪಾತ

ಇಲ್ಲಮೆ - ಇಲ್ಲದಿರುವಿಕೆ

ಉರುಳ್ಚು - ಉರುಳಿಸು

ಒಸಗೆ - ಉತ್ಸವ

ಕಾದಲ್ಮೆ - ಪ್ರೀತಿ

ಗಾಳಿವಟ್ಟೆಗ - ದೇವತೆ

ತುೞಿ(ಳಿ)ಲ್ - ನಮಸ್ಕಾರ

ನಾಡಾಣ್ಮ - ರಾಜ

ಪೂಣ್ಕೆ - ಪ್ರತಿಗ್ನೆ

ಸಪ್ಪಳ - ಸದ್ದು

ಹೇದೆ - ಬೂತ

ಹೊತ್ತಗೆ ತಿಟ್ಟ ಇಲ್ಲಿದೆ, ಹೀಗೆ ಹಲವು ಕನ್ನಡದ್ದೇ ಪದಗಳನ್ನು ತಿಳಿದುಕೊಳ್ಳುವುದಕ್ಕೆ ಈ ಹೊತ್ತಗೆ ತುಂಬಾ ನೆರವು ನೀಡುತ್ತದೆ. ಈ ಓದುಗೆಯನ್ನು ಇಲ್ಲಿಂದ ಕೊಳ್ಳಬಹುದು :- ಹಳಗನ್ನಡ ಶಬ್ದಾರ್ಥಕೋಶ