ಮಂಗಳವಾರ, ಆಗಸ್ಟ್ 15, 2023

ಮರೆತಿರುವ ಹಳೆಗನ್ನಡ ಪದ "ಪುಳ್"

ಕನ್ನಡಕ್ಕೆ ಒಂದು ನಿಡಿದಾದ ಹಿನ್ನಡವಳಿಯಿದೆ ಎಂದು ಆಗಾಗ ನಮ್ಮ ಕಿವಿಗೆ ಬೀಳುವ ಮಾತುಗಳು. ಕನ್ನಡವನ್ನು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ಹೆಚ್ಚಾಗಿ ಗುಂಪಿಸುವುದರ ಕುರಿತು ಗೊತ್ತು. ಆದರೆ ಹಿಂದಿನ ಕನ್ನಡ ಇಲ್ಲವೇ ಹಳೆಗನ್ನಡದಲ್ಲಿರುವ ಕೆಲವು ಕನ್ನಡದ್ದೇ ಒರೆಗಳು ನಾವು ಹೆಚ್ಚುಕಡಿಮೆ ಕೇಳಿರುವುದಿಲ್ಲ. ಒಂದು ಎತ್ತುಗೆ :- "ಪುಳ್"

ಹಾಗಾದರೆ ಈ ಒರೆಯ ಹುರುಳೇನು ? ಈ ಒರೆಯ ಹುರುಳು "ಹಕ್ಕಿ ಇಲ್ಲವೇ ಪಕ್ಶಿ". ಹಿಂದೆ ಹಿರಿಯರಾದ ಡಿ.ಎಲ್.ನರಸಿಂಹಾಚಾರ್ ಅವರ "ಪೀಠಿಕೆಗಳು ಲೇಖನಗಳು" ಹೊತ್ತಗೆಯಲ್ಲಿ "ಪಕ್ಷಿ < ಹಕ್ಕಿಗೆ ಸಮಾನ ಕನ್ನಡ ಶಬ್ದ" ಅಂಕಣದಲ್ಲಿ ಇದರ ಕುರಿತು ಹೆಚ್ಚು ಬೆಳಕು ಚೆಲ್ಲುತ್ತದೆ. 

ಈ ಅಂಕಣದಲ್ಲಿ ಪುಳ್ ಒರೆ ಬಳಕೆ ಕುರಿತು ಹಲವು ಎತ್ತುಗೆಗಳಿವೆ, ಅದರಲ್ಲಿ "ಕವಿರಾಜಮಾರ್ಗ"ದಲ್ಲಿ ಆಗಿರುವ ಬಳಕೆ ಒಂದೆತ್ತುಗೆ. ಡಾ || ಪಿ.ವಿ.ನಾರಾಯಣ ಅವರ "ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥಸಂಕಲನ - ಪ್ರಯೋಗಗಳೊಂದಿಗೆ)" ಹೊತ್ತಗೆಯಲ್ಲಿ "ಪುಳ್" ಒರೆ ಜೊತೆ ಕವಿರಾಜಮಾರ್ಗದಲ್ಲಿ ಆಗಿರುವ ಬಳಕೆ ನೀಡಿದ್ದಾರೆ, ಅದರ ತಿಟ್ಟ ಇಲ್ಲಿದೆ :- 


ಹಳೆಗನ್ನಡದ "ಪುಳ್" ಈಗಿನ ಕನ್ನಡದಲ್ಲಿ "ಪುಳ್ಳು" ಇಲ್ಲ "ಹುಳ್ಳು" ಆಗುತ್ತದೆ (ಹಳೆಗನ್ನಡದ ಪುಲ್ ಹೊಸಗನ್ನಡದಲ್ಲಿ "ಹುಲ್ಲು" ಆಗಿರುವ ಹಾಗೆ). ಹೀಗೆ ಹಳೆಗನ್ನಡದಲ್ಲಿ ಬಳಕೆಯಾಗಿರುವ ಹಲವು ಕನ್ನಡದ್ದೇ ಒರೆಗಳು ನಾವು ಈಗ ಬಳಸುತ್ತಿಲ್ಲ, ಸರಿ. ಆದರೆ ಕನ್ನಡದ್ದೇ ಒರೆಯಿಲ್ಲವೆಂಬ ತೀರ‍್ಮಾನಕ್ಕೆ ಬರುವ ಮುನ್ನ ಹಳೆಗನ್ನಡದ ಬರಹಗಳು, ಕಲ್ಬರಹಗಳು ಮುಂತಾದವುಗಳ ನೆರವು ಪಡೆಯೋಣ. ಮುಂದಕ್ಕೆ ಕನ್ನಡದಲ್ಲಿ ಇಂತಹ ಒರೆಗಳು ಬಳಸಬಹುದು ಹಾಗೂ ಪದಕಟ್ಟಣೆ ಕೆಲಸದಲ್ಲು ಈ ಒರೆಗಳ ನೆರವು ಪಡೆಯಬಹುದು. ಒಟ್ಟಿನಲ್ಲಿ ಕನ್ನಡ ನುಡಿ ಆಳ, ಆಗಲ ಒಮ್ಮೊಮ್ಮೆ ಬೆರಗು ಮೂಡಿಸುವುದರಲ್ಲಿ ಎರಡು ಮಾತಿಲ್ಲ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ