ಶುಕ್ರವಾರ, ಆಗಸ್ಟ್ 11, 2023

ಕನ್ನಡದಲ್ಲಿ ಪದಕಟ್ಟಣೆ - ಏರೋಪ್ಲೇನ್‍ ಎತ್ತುಗೆ

ಯಾವುದೇ ನುಡಿಯಾಗಲಿ ಅದರಲ್ಲಿ ನಾವು ಹಲವು, ಹಲವು ಒರೆಗಳನ್ನು ಬಳಸುತ್ತೇವೆ. ಇದರ ಜೊತೆ ಹಲವು ನುಡಿಗಳಲ್ಲಿ ಹಲವು ಒರೆಗಳು ಹುಟ್ಟುತ್ತವೆ. ಅವುಗಳಲ್ಲಿ ಕೆಲವು ಮಂದಿ ಬಳಸುತ್ತಾರೆ. ಹೊತ್ತು ಕಳೆದ ಹಾಗೆ ಕೆಲವು ಬಳಕೆಯಿಂದ ತಪ್ಪಿಹೋಗುತ್ತವೆ. ಇವುಗಳ ನಡುವೆ ಒಂದಂತು ಮರೆಯಬಾರದು ಒರೆಕಟ್ಟಣೆ ನಿಲ್ಲದ ಕೆಲಸ, ಎಡೆಬಿಡದೆ ನಡೆಯುತ್ತಿರುತ್ತದೆ. ಕನ್ನಡದಲ್ಲು ಹೀಗೆ ನಡೆದುಕೊಂಡು ಬಂದಿದೆ. 

ಈ ಹೊತ್ತಿನಲ್ಲಿ ಏರೋಪ್ಲೇನ್‍ಗೆ ಕನ್ನಡದಲ್ಲಿ ನಡೆದ ಪದಕಟ್ಟಣೆ ಕುರಿತು ಕೆಲವು ಮಾತುಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಹಿಂದೆ ಮುದ್ದಣ ಅವರು ಇದಕ್ಕೆ "ಗಾಳಿದೇರ್ (ಗಾಳಿ + ತೇರ್)" ಎಂಬ ಒರೆಯನ್ನು ಕಟ್ಟಿ, ಅದನ್ನು ತಮ್ಮ ಅದ್ಭುತ ರಾಮಾಯಣ ಬರಹದಲ್ಲಿ ಬಳಸಿದ್ದರು.

ಇದು ಇಲ್ಲಿಗೆ ಮುಗಿಲಿಲ್ಲ, ಡಿ.ಎಲ್.ನರಸಿಂಹಾಚಾರ್ ಅವರ "ಪೀಠಿಕೆಗಳು, ಲೇಖನಗಳು" ಹೊತ್ತಗೆಯ "ಕನ್ನಡದಲ್ಲಿ ಶಬ್ದರಚನೆ" (ಹಾಳೆಬದಿ ೮೦೬) ಅಂಕಣ ನೋಡಿದರೆ ಅದರಲ್ಲಿ ಹಿರಿಯರು ಹೇಳುವುದು, ಓರ‍್ವ ಕನ್ನಡಿಗ (ಹೆಸರು ಗೊತ್ತಿಲ್ಲ) ಇದೇ ಏರೋಪ್ಲೇನ್‍ಗೆ "ರೆಕ್ಕೆಬಂಡಿ" ಎಂದು ಒರೆ ಕಟ್ಟಿದ್ದರು. ಡಿ.ಎಲ್.ನರಸಿಂಹಾಚಾರ್ ಅವರ ಮಾತುಗಳ ತಿಟ್ಟ ಇಲ್ಲಿದೆ :- 



ಇದು ಇಲ್ಲಿಗೆ ಮುಗಿಲಿಲ್ಲ, ಹಿರಿಯರಾದ ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು ಕೂಡ ಇದೇ ಏರೋಪ್ಲೇನ್‍ಗೆ ಒಂದು ಒರೆ ಕಟ್ಟಿದ್ದರು, ಅದು "ಬಾನೋಡ (ಬಾನ್ + ಓಡ)" (ಬಾನಿನಲ್ಲಿ ಹಾರುವ ಓಡ (ದೋಣಿ)), ಇದು ಅಚ್ಚಗನ್ನಡ ನುಡಿಕೋಶ ಹೊತ್ತಗೆಯಲ್ಲಿ "ಮಕ್ಕಳ ಮಾತು" ಅಡಿಯಲ್ಲಿ ಕಾಣುತ್ತದೆ. ಅದರ ತಿಟ್ಟ ಇಲ್ಲಿದೆ :- 


ಒಟ್ಟಿನಲ್ಲಿ ಕನ್ನಡದಲ್ಲು ಒರೆಕಟ್ಟಣೆಗೆ ದೊಡ್ಡ ಹಿನ್ನಡವಳಿಯಿದೆ, ಏರೋಪ್ಲೇನ್ ಒಂದೇ ಒರೆಗೆ ಗಾಳಿದೇರ್, ರೆಕ್ಕೆಬಂಡಿ ಮತ್ತು ಬಾನೋಡ ಎಂಬ ಮೂರು ಒರೆಗಳನ್ನು ನಮ್ಮ ಹಿರೀಕರು ಕಟ್ಟಿದ್ದರು. ನಾವು ಇದೇ ಕೆಲಸವನ್ನು ಮುಂದುವರೆಸೋಣ, ಹೆಚ್ಚೆಚ್ಚು ಕನ್ನಡದ್ದೇ ಒರೆ ಕಟ್ಟುವುದರ ಜೊತೆ ಇಡಿನೆಲದ ತಿಳಿವಳಿಕೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವ ಹಾಗೆ ಮಾಡೋಣ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ