ಶನಿವಾರ, ಆಗಸ್ಟ್ 12, 2023

ಕನ್ನಡದಲ್ಲಿ ಪದಕಟ್ಟಣೆ - ಹಳೆಗನ್ನಡ ನೆರವು

ಹಿಂದಿನ ಬರಹದಲ್ಲಿ ನೋಡಿದ ಹಾಗೆ ಕನ್ನಡದಲ್ಲಿ ಪದಕಟ್ಟಣೆಗೆ ಒಂದು ಹಿನ್ನಡವಳಿಯೇ ಇದೆ. ಪದಕಟ್ಟಣೆ ಕೆಲಸ ನಿಲ್ಲದ ಕೆಲಸವೆಂದು ಅದರಿಂದ ತಿಳಿಯುತ್ತದೆ. ಕನ್ನಡದಲ್ಲಿ  ಪದಕಟ್ಟಣೆಗೆ ಏನೇನು ಬೇಕೆಂದು ಹಲವು ಸಲ ನಮ್ಮಲ್ಲಿ ಕೇಳ್ವಿ ಮೂಡುತ್ತದೆ. ಪದಕಟ್ಟಣೆಗೆ ಬೇರುಪದಗಳು, ಹಿನ್ನೊಟ್ಟುಗಳು(Suffixes), ಪದಬಗೆಗಳು ಇವೆಲ್ಲವೂ ಬೇಕಾಗುತ್ತದೆ. ಇದರಲ್ಲಿ ಬೇರುಪದಗಳು ಹಾಗು ಪದಬಗೆಗಳನ್ನು ಬಳಸಿ ಕನ್ನಡದಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಕಟ್ಟಬಹುದು. 

ಈಗಿರುವ ಕನ್ನಡದ್ದೇ ಒರೆಗಳ ಹುಡುಕಾಟದಲ್ಲಿ ನಾವು ಹಳೆಗನ್ನಡ ಒರೆಗಳ ನೆರವು ಪಡೆಯಬಹುದು, ನೆನಪಿರಲಿ ಹಳೆಗನ್ನಡ ಒರೆಗಳ ನೆರವು ಹೊರತು ಹಳೆಗನ್ನಡ ಒರೆಗಳನ್ನೇ ಹಾಗೆ ಬಳಸಬೇಕೆಂಬ ಕಟ್ಟುಪಾಡಲ್ಲ. ಇಲ್ಲಿ ಒಂದು ಎತ್ತುಗೆ ನೀಡುವೆ, ಹಳಗನ್ನಡದಲ್ಲಿ ಪೊೞ(ಳ)ಲ್ ಎಂಬ ಒರೆಯಿದೆ, ಇದಕ್ಕೆ ನಗರ, ಊರು ಎಂಬ ಒಂದು ಹುರುಳಿದೆ. ಈಗಿನ ಕನ್ನಡ ಇಲ್ಲ ಬರಹಕನ್ನಡದಲ್ಲಿ ಅದು ಹೊಳಲು ಆಗುತ್ತದೆ. ಪದಕಟ್ಟಣೆಗೆ ಪೊೞಲ್ ನೆರವು ಪಡೆದುಕೊಂಡು ಈಗಿನ ಕನ್ನಡದಲ್ಲಿರುವ ಹೊಳಲು ಬಳಸಿ ಕನ್ನಡ ಒರೆ ಕಟ್ಟಬಹುದು. ಹೊಳಲು ಬಳಸಿ ಹೊಳಲಾಳ್ವಿಕೆ (ಹೊಳಲು + ಆಳ್ವಿಕೆ), ಇದು ಊರಿನ ಆಡಳಿತವೆಂದು ತಿಳಿಸುವ ಒಂದು ಒರೆ ಕಟ್ಟಬಹುದು. ಹೀಗೆ ಹಲವು ಕನ್ನಡ ಒರೆಗಳನ್ನು ನಾವು ಕಟ್ಟಬಹುದು. ಇದೇ ಬಗೆಯಲ್ಲಿ ಹಲವು ಎತ್ತುಗೆಗಳನ್ನು ನಾನು ನೀಡಬಲ್ಲೆ.

ಹೀಗೆ ಹಳೆಗನ್ನಡದ ಒರೆಗಳ ನೆರವಿನಿಂದ ಹಲವು ಕನ್ನಡದ್ದೇ ಒರೆ ಕಟ್ಟಬಹುದು. ಇದೆಲ್ಲ ಬರೆಯುವಾಗ ನನಗೆ ನೆನಪಿಗೆ ಬರುವ ಹೊತ್ತಗೆಯೇ "ಕನ್ನಡ ಬರಹವನ್ನು ಸರಿಪಡಿಸೋಣ", ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಈ ಕೆಲಸ ನೆನಪು ಮಾಡಲೇ ಬೇಕು. ಇತ್ತೀಚಗೆ ತಿದ್ದಿದ, ಮೂರನೆ ಅಚ್ಚು ಕಂಡ ಈ ಹೊತ್ತಗೆ ಬಿಡುಗಡೆಯಾಯಿತು. ಹೊತ್ತಗೆ ಮುಂಬದಿ ತಿಟ್ಟ ಇಲ್ಲಿದೆ :- 



ಕನ್ನಡ ಬರಹವನ್ನು ಸರಿಪಡಿಸೋಣ ಓದುಗೆ ಇಲ್ಲಿಂದ ನಾವು ಕೊಳ್ಳಬಹುದು :- https://harivubooks.com/products/kannada-barahavannu-saripadisona


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ