ಸೋಮವಾರ, ಆಗಸ್ಟ್ 28, 2023

ಕನ್ನಡದಲ್ಲಿ ಪದಕಟ್ಟಣೆ - ನೆರವು ನೀಡುವ ಕೆಲವು ಹೊತ್ತಗೆ ಪಟ್ಟಿ

ಪದ ಕಟ್ಟಣೆಗೆ ನೆರವು ನೀಡಬಲ್ಲ ಕೆಲವು ಹೊತ್ತಗೆಗಳ ಪಟ್ಟಿ:-

೧. ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/kannadadalle-padagalannu-kattuva-bagge)

. ಇಂಗ್ಲಿಶ್-ಕನ್ನಡ ಪದನೆರಕೆ - ಡಾ || ಡಿ.ಎನ್.ಶಂಕರ್ ಬಟ್
(ಕೊಳ್ಳುವುದಕ್ಕೆ:- https://harivubooks.com/products/english-kannada-padanerake)

. ಕನ್ನಡ ಬರಹದ ಸೊಲ್ಲರಿಮೆ ೧ - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ :- https://harivubooks.com/products/kannada-barahada-sollarime-1)

೪. ಅಚ್ಚಗನ್ನಡ ನುಡಿಕೋಶ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡ (ಕೊಳ್ಳುವುದಕ್ಕೆ:- https://harivubooks.com/products/acchagannadada-nudikosha)

೫. ದ್ರಾವಿಡಭಾಷಾ ಜ್ಞಾತಿಪದಕೋಶ - ಕನ್ನಡ ಸಾಹಿತ್ಯ ಪರಿತ್ತು (ಕೊಳ್ಳುವುದಕ್ಕೆ:- https://harivubooks.com/products/dravidabhaasha-jnaatipadakosha)

. ಕನ್ನಡ ನಿಘಂಟು (ಎಂಟು ಸಂಪುಟಗಳು) - ಕನ್ನಡ ಸಾಹಿತ್ಯ ಪರಿತ್ತು

. ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/samskruta-padagalige-kannadadde-padagalu)

೮. A Dravidian Etymological Dictionary - M B Emeneau and T Burrow (ಕೊಂಡಿ :- https://dsal.uchicago.edu/dictionaries/burrow/)

. ಇಂಗ್ಲಿಷ್ ಕನ್ನಡ ವೈದ್ಯ ಪದಕೋಶ - ಡಾ || ಡಿ.ಎಸ್.ಶಿವಪ್ಪ

೧೦. Enlarged Kittels Kannada English Dictionary (Prof.M.Mariappa Bhat) (ಕೊಂಡಿ :- https://dsal.uchicago.edu/dictionaries/kittel/)

ಕೆಲವು ಒಳನುಡಿ ಪದನೆರಕೆಗಳ ನೆರವು ಕೂಡ ಪಡೆಯಬಹುದು, ಪಟ್ಟಿ ಇಲ್ಲಿದೆ :-

೧. ಹವ್ಯಕ-ಇಂಗ್ಲಿಷ್ ನಿಘಂಟು - ಮರಿಯಪ್ಪ ಬಟ್

೨. ಚಿಗಟೇರಿ ಪದಕೋಶ - ಮುದೇನೂರು ಸಂಗಣ್ಣ

೩. ಕುಂದಾಪ್ರ ಕನ್ನಡ ನಿಘಂಟು - ಪಂಜು ಗಂಗೊಳ್ಳಿ

೪. ಮಲೆನಾಡು ನುಡಿಕೋಶ - ವೇಣಾಕ್ಷಿ ಎಸ್.ಡಿ

೫. ಕಾಸರಗೋಡು ಕನ್ನಡ ಪದಕೋಶ - ಡಾ || ಎ.ಮೋಹನ್ ಕುಂಟಾರ್

೬. ಬೀದರ ಕನ್ನಡ ಕೋಶ - ದೇಶಾಂಶ ಹುಡಗಿ

ಕೆಲವು ಹೊತ್ತಗೆಗಳು ಬರಹಗಾರರ ಪದಬಳಕೆ ಸಲುವಾಗಿ ಬರೆದಿರುವುದು, ಇವು ಕೂಡ ನೆರವಿಗೆ ಬರುತ್ತದೆ :-

೧. ಮುದ್ದಣ ಪದಪ್ರಯೋಗ ಕೋಶ - ಜಿ.ವೆಂಕಟಸುಬ್ಬಯ್ಯ

೨. ಗೋವಿಂದ ಪೈ ನಿಘಂಟು - ಪ್ರೊ.ಎ.ವಿ.ನಾವಡ

೩. ಬೇಂದ್ರೆಕಾವ್ಯ : ಪದನಿರುಕ್ತ - ಡಾ || ಜಿ.ಕೃಷ್ಣಪ್ಪ

೪. ಕುವೆಂಪು ಸಾಹಿತ್ಯ ಪದವಿವರಣೆ ಕೋಶ (ಎಂಟು ಕಂತುಗಳು) - ಕುವೆಂಪು ವಿಶ್ವವಿದ್ಯಾನಿಲಯ

ಹಳೆಗನ್ನಡದ ನೆರವು ಪಡೆಯಲು ಬಯಸಿದರೆ, ಈ ಕೆಳಗಿನ ಹೊತ್ತಗೆಗಳ ನೆರವು ಪಡೆಯಬಹುದು :-

೧. ಹಳಗನ್ನಡ ಶಬ್ದಾರ್ಥಕೋಶ - ಎನ್.ಬಸವಾರಾಧ್ಯ

೨. ಹಳಗನ್ನಡ ಅರ್ಥಕೋಶ - ಐ.ಎಂ.ಕೊಟ್ರಯ್ಯ

೩. ಚಂಪೂ ನುಡಿಗನ್ನಡಿ - ಡಾ || ಪಿ.ವಿ.ನಾರಾಯಣ

ಶನಿವಾರ, ಆಗಸ್ಟ್ 19, 2023

ಕಾಸರಗೋಡು ಕನ್ನಡ ಪದಕೋಶ

ಕನ್ನಡದಲ್ಲಿ ಹಲವು ಒಳನುಡಿಗಳಿವೆ ಅಂದರೆ ಕನ್ನಡದೊಳಗೆ ಹಲವು ಕನ್ನಡಗಳಿವೆ. ಕನ್ನಡದ ಹಲವುತನ ಇರುವುದೇ ಈ ಹಲವು ಒಳನುಡಿಗಳಲ್ಲಿ. ಕನ್ನಡ ಒಳನುಡಿಗಳ ಸಲುವಾಗಿ ಹಲವು ಹೊತ್ತಗೆಗಳು ಹಿಂದಿನಿಂದಲೂ ಮೂಡಿಬಂದಿವೆ, ಇದಕ್ಕೆ ಹೊಸ ಸೇರ‍್ಪಡೆ, ಡಾ || ಎ.ಮೋಹನ ಕುಂಟಾರ್ ಅವರ "ಕಾಸರಗೋಡು ಕನ್ನಡ ಪದಕೋಶ". ಈ ಹೊತ್ತಗೆಯನ್ನು ಕನ್ನಡ ಕಲಿಕೆವೀಡು, ಹಂಪಿ ಅವರು ಹೊರತಂದಿದ್ದಾರೆ. ಹೊತ್ತಗೆ ಮುಂಬದಿ ತಿಟ್ಟ ಇಲ್ಲಿದೆ :- 



ಈ ಹೊತ್ತಗೆಯಿಂದ, ಕೆಲವು ಗಮನ ಸೆಳೆದ ಒರೆಗಳು :- 

೧. ಅಂಟುಮಣ್ಣು - ಗೋಡೆ ಕಟ್ಟಲು ಹದಬರಿಸಿದ ಮಣ್ಣು
೨. ಅಂಗಡಿಮದ್ದು :- ಅಂಗಡಿಗಳಲ್ಲಿ ಕೊಳ್ಳಲು ಸಿಗುವ ಕಚ್ಚಾ ಔಷಧಿ 
೩. ಊರುಕಟ್ಟು :- ಊರಿನ ಕಟ್ಟುಕಟ್ಟಳೆಗಳು, ಸಂಪ್ರದಾಯಗಳು
೪. ಊಳ್ಗ :- ಊಳಿಗ, ಕೆಲಸ
೫. ಎದುರೆದುರು :- ೧. ಮುಖಾಮುಖಿ ೨. ಹೆಣ್ಣು ಕೊಟ್ಟ ಮನೆಯಿಂದಲೇ ಹೆಣ್ಣು ತಂದು ಒಂದೇ ಹೊತ್ತಿಗೆ ಮಾಡಿಕೊಳ್ಳುವ ಮದುವೆ
೬. ಒಕ್ಕಲಾಗು :- ಗೃಹಪ್ರವೇಶವಾಗು
೭. ಕಟ್ಟುಕಟ್ಟಳೆ :- ವಾಡಿಕೆಯಂತೆ ನಡೆಯುವ ಆಚರಣೆ
೮. ಕೇಳ್ವಿ :- ಪ್ರಶ್ನೆ
೯. ಚಪ್ಪೆ :- ಸಪ್ಪೆ
೧೦. ತೆಂಕು :- ದಕ್ಷಿಣ ದಿಕ್ಕು
೧೧. ನಂಜಾಳ :- ಹೊಟ್ಟೆಕಿಚ್ಚು ಪಡುವವ
೧೨. ಬಾಯಿಕಟ್ಟು :- ಉಪವಾಸವಿರು
೧೩. ಬೊಳ್ಳಿ :- ಬಳ್ಳಿ, ಹಗ್ಗ
೧೪. ಮಳೆಬಿಸಿಲು :- ಮಳೆ ಮತ್ತು ಬಿಸಿಲು ಒಂದೇ ಹೊತ್ತಿನಲ್ಲಿ ಬರುವುದು
೧೫. ಮೂಡಲು :- ಪೂರ್ವದಿಕ್ಕು
೧೬. ಸಳಿ :- ಚಳಿ
೧೭. ಸಿಂಬಳುಹುಳು :- ಬಸವನಹುಳು
೧೮. ಹಚ್ಚಡ :- ಹೊದಿಕೆ
೧೯. ಹಸಿಮದ್ದು :- ಹಸಿರು ಗಿಡ, ಹುಲ್ಲುಗಳನ್ನು ಬಳಸಿ ಮಾಡುವ ಮದ್ದು
೨೦. ಹುಟ್ಟುವಳಿ :- ಬೇಸಾಯದ ಆದಾಯ
೨೧. ಹೊತ್ತು :- ಸೂರ‍್ಯ


ಮಂಗಳವಾರ, ಆಗಸ್ಟ್ 15, 2023

ಮರೆತಿರುವ ಹಳೆಗನ್ನಡ ಪದ "ಪುಳ್"

ಕನ್ನಡಕ್ಕೆ ಒಂದು ನಿಡಿದಾದ ಹಿನ್ನಡವಳಿಯಿದೆ ಎಂದು ಆಗಾಗ ನಮ್ಮ ಕಿವಿಗೆ ಬೀಳುವ ಮಾತುಗಳು. ಕನ್ನಡವನ್ನು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ಹೆಚ್ಚಾಗಿ ಗುಂಪಿಸುವುದರ ಕುರಿತು ಗೊತ್ತು. ಆದರೆ ಹಿಂದಿನ ಕನ್ನಡ ಇಲ್ಲವೇ ಹಳೆಗನ್ನಡದಲ್ಲಿರುವ ಕೆಲವು ಕನ್ನಡದ್ದೇ ಒರೆಗಳು ನಾವು ಹೆಚ್ಚುಕಡಿಮೆ ಕೇಳಿರುವುದಿಲ್ಲ. ಒಂದು ಎತ್ತುಗೆ :- "ಪುಳ್"

ಹಾಗಾದರೆ ಈ ಒರೆಯ ಹುರುಳೇನು ? ಈ ಒರೆಯ ಹುರುಳು "ಹಕ್ಕಿ ಇಲ್ಲವೇ ಪಕ್ಶಿ". ಹಿಂದೆ ಹಿರಿಯರಾದ ಡಿ.ಎಲ್.ನರಸಿಂಹಾಚಾರ್ ಅವರ "ಪೀಠಿಕೆಗಳು ಲೇಖನಗಳು" ಹೊತ್ತಗೆಯಲ್ಲಿ "ಪಕ್ಷಿ < ಹಕ್ಕಿಗೆ ಸಮಾನ ಕನ್ನಡ ಶಬ್ದ" ಅಂಕಣದಲ್ಲಿ ಇದರ ಕುರಿತು ಹೆಚ್ಚು ಬೆಳಕು ಚೆಲ್ಲುತ್ತದೆ. 

ಈ ಅಂಕಣದಲ್ಲಿ ಪುಳ್ ಒರೆ ಬಳಕೆ ಕುರಿತು ಹಲವು ಎತ್ತುಗೆಗಳಿವೆ, ಅದರಲ್ಲಿ "ಕವಿರಾಜಮಾರ್ಗ"ದಲ್ಲಿ ಆಗಿರುವ ಬಳಕೆ ಒಂದೆತ್ತುಗೆ. ಡಾ || ಪಿ.ವಿ.ನಾರಾಯಣ ಅವರ "ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥಸಂಕಲನ - ಪ್ರಯೋಗಗಳೊಂದಿಗೆ)" ಹೊತ್ತಗೆಯಲ್ಲಿ "ಪುಳ್" ಒರೆ ಜೊತೆ ಕವಿರಾಜಮಾರ್ಗದಲ್ಲಿ ಆಗಿರುವ ಬಳಕೆ ನೀಡಿದ್ದಾರೆ, ಅದರ ತಿಟ್ಟ ಇಲ್ಲಿದೆ :- 


ಹಳೆಗನ್ನಡದ "ಪುಳ್" ಈಗಿನ ಕನ್ನಡದಲ್ಲಿ "ಪುಳ್ಳು" ಇಲ್ಲ "ಹುಳ್ಳು" ಆಗುತ್ತದೆ (ಹಳೆಗನ್ನಡದ ಪುಲ್ ಹೊಸಗನ್ನಡದಲ್ಲಿ "ಹುಲ್ಲು" ಆಗಿರುವ ಹಾಗೆ). ಹೀಗೆ ಹಳೆಗನ್ನಡದಲ್ಲಿ ಬಳಕೆಯಾಗಿರುವ ಹಲವು ಕನ್ನಡದ್ದೇ ಒರೆಗಳು ನಾವು ಈಗ ಬಳಸುತ್ತಿಲ್ಲ, ಸರಿ. ಆದರೆ ಕನ್ನಡದ್ದೇ ಒರೆಯಿಲ್ಲವೆಂಬ ತೀರ‍್ಮಾನಕ್ಕೆ ಬರುವ ಮುನ್ನ ಹಳೆಗನ್ನಡದ ಬರಹಗಳು, ಕಲ್ಬರಹಗಳು ಮುಂತಾದವುಗಳ ನೆರವು ಪಡೆಯೋಣ. ಮುಂದಕ್ಕೆ ಕನ್ನಡದಲ್ಲಿ ಇಂತಹ ಒರೆಗಳು ಬಳಸಬಹುದು ಹಾಗೂ ಪದಕಟ್ಟಣೆ ಕೆಲಸದಲ್ಲು ಈ ಒರೆಗಳ ನೆರವು ಪಡೆಯಬಹುದು. ಒಟ್ಟಿನಲ್ಲಿ ಕನ್ನಡ ನುಡಿ ಆಳ, ಆಗಲ ಒಮ್ಮೊಮ್ಮೆ ಬೆರಗು ಮೂಡಿಸುವುದರಲ್ಲಿ ಎರಡು ಮಾತಿಲ್ಲ.  

ಶನಿವಾರ, ಆಗಸ್ಟ್ 12, 2023

ಕನ್ನಡದಲ್ಲಿ ಪದಕಟ್ಟಣೆ - ಹಳೆಗನ್ನಡ ನೆರವು

ಹಿಂದಿನ ಬರಹದಲ್ಲಿ ನೋಡಿದ ಹಾಗೆ ಕನ್ನಡದಲ್ಲಿ ಪದಕಟ್ಟಣೆಗೆ ಒಂದು ಹಿನ್ನಡವಳಿಯೇ ಇದೆ. ಪದಕಟ್ಟಣೆ ಕೆಲಸ ನಿಲ್ಲದ ಕೆಲಸವೆಂದು ಅದರಿಂದ ತಿಳಿಯುತ್ತದೆ. ಕನ್ನಡದಲ್ಲಿ  ಪದಕಟ್ಟಣೆಗೆ ಏನೇನು ಬೇಕೆಂದು ಹಲವು ಸಲ ನಮ್ಮಲ್ಲಿ ಕೇಳ್ವಿ ಮೂಡುತ್ತದೆ. ಪದಕಟ್ಟಣೆಗೆ ಬೇರುಪದಗಳು, ಹಿನ್ನೊಟ್ಟುಗಳು(Suffixes), ಪದಬಗೆಗಳು ಇವೆಲ್ಲವೂ ಬೇಕಾಗುತ್ತದೆ. ಇದರಲ್ಲಿ ಬೇರುಪದಗಳು ಹಾಗು ಪದಬಗೆಗಳನ್ನು ಬಳಸಿ ಕನ್ನಡದಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಕಟ್ಟಬಹುದು. 

ಈಗಿರುವ ಕನ್ನಡದ್ದೇ ಒರೆಗಳ ಹುಡುಕಾಟದಲ್ಲಿ ನಾವು ಹಳೆಗನ್ನಡ ಒರೆಗಳ ನೆರವು ಪಡೆಯಬಹುದು, ನೆನಪಿರಲಿ ಹಳೆಗನ್ನಡ ಒರೆಗಳ ನೆರವು ಹೊರತು ಹಳೆಗನ್ನಡ ಒರೆಗಳನ್ನೇ ಹಾಗೆ ಬಳಸಬೇಕೆಂಬ ಕಟ್ಟುಪಾಡಲ್ಲ. ಇಲ್ಲಿ ಒಂದು ಎತ್ತುಗೆ ನೀಡುವೆ, ಹಳಗನ್ನಡದಲ್ಲಿ ಪೊೞ(ಳ)ಲ್ ಎಂಬ ಒರೆಯಿದೆ, ಇದಕ್ಕೆ ನಗರ, ಊರು ಎಂಬ ಒಂದು ಹುರುಳಿದೆ. ಈಗಿನ ಕನ್ನಡ ಇಲ್ಲ ಬರಹಕನ್ನಡದಲ್ಲಿ ಅದು ಹೊಳಲು ಆಗುತ್ತದೆ. ಪದಕಟ್ಟಣೆಗೆ ಪೊೞಲ್ ನೆರವು ಪಡೆದುಕೊಂಡು ಈಗಿನ ಕನ್ನಡದಲ್ಲಿರುವ ಹೊಳಲು ಬಳಸಿ ಕನ್ನಡ ಒರೆ ಕಟ್ಟಬಹುದು. ಹೊಳಲು ಬಳಸಿ ಹೊಳಲಾಳ್ವಿಕೆ (ಹೊಳಲು + ಆಳ್ವಿಕೆ), ಇದು ಊರಿನ ಆಡಳಿತವೆಂದು ತಿಳಿಸುವ ಒಂದು ಒರೆ ಕಟ್ಟಬಹುದು. ಹೀಗೆ ಹಲವು ಕನ್ನಡ ಒರೆಗಳನ್ನು ನಾವು ಕಟ್ಟಬಹುದು. ಇದೇ ಬಗೆಯಲ್ಲಿ ಹಲವು ಎತ್ತುಗೆಗಳನ್ನು ನಾನು ನೀಡಬಲ್ಲೆ.

ಹೀಗೆ ಹಳೆಗನ್ನಡದ ಒರೆಗಳ ನೆರವಿನಿಂದ ಹಲವು ಕನ್ನಡದ್ದೇ ಒರೆ ಕಟ್ಟಬಹುದು. ಇದೆಲ್ಲ ಬರೆಯುವಾಗ ನನಗೆ ನೆನಪಿಗೆ ಬರುವ ಹೊತ್ತಗೆಯೇ "ಕನ್ನಡ ಬರಹವನ್ನು ಸರಿಪಡಿಸೋಣ", ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಈ ಕೆಲಸ ನೆನಪು ಮಾಡಲೇ ಬೇಕು. ಇತ್ತೀಚಗೆ ತಿದ್ದಿದ, ಮೂರನೆ ಅಚ್ಚು ಕಂಡ ಈ ಹೊತ್ತಗೆ ಬಿಡುಗಡೆಯಾಯಿತು. ಹೊತ್ತಗೆ ಮುಂಬದಿ ತಿಟ್ಟ ಇಲ್ಲಿದೆ :- 



ಕನ್ನಡ ಬರಹವನ್ನು ಸರಿಪಡಿಸೋಣ ಓದುಗೆ ಇಲ್ಲಿಂದ ನಾವು ಕೊಳ್ಳಬಹುದು :- https://harivubooks.com/products/kannada-barahavannu-saripadisona


ಶುಕ್ರವಾರ, ಆಗಸ್ಟ್ 11, 2023

ಕನ್ನಡದಲ್ಲಿ ಪದಕಟ್ಟಣೆ - ಏರೋಪ್ಲೇನ್‍ ಎತ್ತುಗೆ

ಯಾವುದೇ ನುಡಿಯಾಗಲಿ ಅದರಲ್ಲಿ ನಾವು ಹಲವು, ಹಲವು ಒರೆಗಳನ್ನು ಬಳಸುತ್ತೇವೆ. ಇದರ ಜೊತೆ ಹಲವು ನುಡಿಗಳಲ್ಲಿ ಹಲವು ಒರೆಗಳು ಹುಟ್ಟುತ್ತವೆ. ಅವುಗಳಲ್ಲಿ ಕೆಲವು ಮಂದಿ ಬಳಸುತ್ತಾರೆ. ಹೊತ್ತು ಕಳೆದ ಹಾಗೆ ಕೆಲವು ಬಳಕೆಯಿಂದ ತಪ್ಪಿಹೋಗುತ್ತವೆ. ಇವುಗಳ ನಡುವೆ ಒಂದಂತು ಮರೆಯಬಾರದು ಒರೆಕಟ್ಟಣೆ ನಿಲ್ಲದ ಕೆಲಸ, ಎಡೆಬಿಡದೆ ನಡೆಯುತ್ತಿರುತ್ತದೆ. ಕನ್ನಡದಲ್ಲು ಹೀಗೆ ನಡೆದುಕೊಂಡು ಬಂದಿದೆ. 

ಈ ಹೊತ್ತಿನಲ್ಲಿ ಏರೋಪ್ಲೇನ್‍ಗೆ ಕನ್ನಡದಲ್ಲಿ ನಡೆದ ಪದಕಟ್ಟಣೆ ಕುರಿತು ಕೆಲವು ಮಾತುಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಹಿಂದೆ ಮುದ್ದಣ ಅವರು ಇದಕ್ಕೆ "ಗಾಳಿದೇರ್ (ಗಾಳಿ + ತೇರ್)" ಎಂಬ ಒರೆಯನ್ನು ಕಟ್ಟಿ, ಅದನ್ನು ತಮ್ಮ ಅದ್ಭುತ ರಾಮಾಯಣ ಬರಹದಲ್ಲಿ ಬಳಸಿದ್ದರು.

ಇದು ಇಲ್ಲಿಗೆ ಮುಗಿಲಿಲ್ಲ, ಡಿ.ಎಲ್.ನರಸಿಂಹಾಚಾರ್ ಅವರ "ಪೀಠಿಕೆಗಳು, ಲೇಖನಗಳು" ಹೊತ್ತಗೆಯ "ಕನ್ನಡದಲ್ಲಿ ಶಬ್ದರಚನೆ" (ಹಾಳೆಬದಿ ೮೦೬) ಅಂಕಣ ನೋಡಿದರೆ ಅದರಲ್ಲಿ ಹಿರಿಯರು ಹೇಳುವುದು, ಓರ‍್ವ ಕನ್ನಡಿಗ (ಹೆಸರು ಗೊತ್ತಿಲ್ಲ) ಇದೇ ಏರೋಪ್ಲೇನ್‍ಗೆ "ರೆಕ್ಕೆಬಂಡಿ" ಎಂದು ಒರೆ ಕಟ್ಟಿದ್ದರು. ಡಿ.ಎಲ್.ನರಸಿಂಹಾಚಾರ್ ಅವರ ಮಾತುಗಳ ತಿಟ್ಟ ಇಲ್ಲಿದೆ :- 



ಇದು ಇಲ್ಲಿಗೆ ಮುಗಿಲಿಲ್ಲ, ಹಿರಿಯರಾದ ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು ಕೂಡ ಇದೇ ಏರೋಪ್ಲೇನ್‍ಗೆ ಒಂದು ಒರೆ ಕಟ್ಟಿದ್ದರು, ಅದು "ಬಾನೋಡ (ಬಾನ್ + ಓಡ)" (ಬಾನಿನಲ್ಲಿ ಹಾರುವ ಓಡ (ದೋಣಿ)), ಇದು ಅಚ್ಚಗನ್ನಡ ನುಡಿಕೋಶ ಹೊತ್ತಗೆಯಲ್ಲಿ "ಮಕ್ಕಳ ಮಾತು" ಅಡಿಯಲ್ಲಿ ಕಾಣುತ್ತದೆ. ಅದರ ತಿಟ್ಟ ಇಲ್ಲಿದೆ :- 


ಒಟ್ಟಿನಲ್ಲಿ ಕನ್ನಡದಲ್ಲು ಒರೆಕಟ್ಟಣೆಗೆ ದೊಡ್ಡ ಹಿನ್ನಡವಳಿಯಿದೆ, ಏರೋಪ್ಲೇನ್ ಒಂದೇ ಒರೆಗೆ ಗಾಳಿದೇರ್, ರೆಕ್ಕೆಬಂಡಿ ಮತ್ತು ಬಾನೋಡ ಎಂಬ ಮೂರು ಒರೆಗಳನ್ನು ನಮ್ಮ ಹಿರೀಕರು ಕಟ್ಟಿದ್ದರು. ನಾವು ಇದೇ ಕೆಲಸವನ್ನು ಮುಂದುವರೆಸೋಣ, ಹೆಚ್ಚೆಚ್ಚು ಕನ್ನಡದ್ದೇ ಒರೆ ಕಟ್ಟುವುದರ ಜೊತೆ ಇಡಿನೆಲದ ತಿಳಿವಳಿಕೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವ ಹಾಗೆ ಮಾಡೋಣ. 

ಅಂತಿಗೊನೆ - ಕನ್ನಡದ್ದೇ ಒರೆಗಳ ಕಣಜ

ಸೊಪೊಕ್ಲೇಸ್ ಅವರ ಗ್ರೀಕ್ ಆಡುಗಬ್ಬ "ಅಂತಿಗೊನೆ"ಯನ್ನು ಕನ್ನಡಿಸಿದ್ದು ಕ.ವೆಂ.ರಾಘವಾಚಾರ್ ಅವರು. ಇದು ೧೯೫೬ ಏಡಿನಲ್ಲಿ ಬಿಡುಗಡೆಯಾಯಿತು. ಹೊತ್ತಗೆಯ ಹೆಚ್ಚಿನ ಕುರಿಪು ಈ ಕೆಳಗಿನ ತಿಟ್ಟದಲ್ಲಿದೆ. 



ಈ ಓದುಗೆಯ ಮುನ್ನುಡಿ ನೋಡಿದರೆ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ, ಎತ್ತುಗೆ :- ಅರಿಕೆ, ಕಾಣಿಕೆಯೊಪ್ಪಿಕೆ, ಕಡೆನೆನಪು. ಮುನ್ನುಡಿ ಓದುವಾಗ ತಿಳಿಯುತ್ತದೆ ಕನ್ನಡಿಸುವಾಗ ಇದನ್ನು ಹಳೆಗನ್ನಡದಲ್ಲಿ ಕನ್ನಡಿಸಿದ್ದಾರೆ ಎಂದು. ಇದನ್ನು ಓದುವಾಗ ಹಳೆಗನ್ನಡದ ಹಲವು ಕನ್ನಡದ್ದೇ ಒರೆಗಳು ನಮ್ಮ ಗಮನ ಸೆಳೆಯುತ್ತದೆ, ಅದರಲ್ಲಿ ಒಂದು "ಕೋಯಿಲ್(ಲು)", ಹಿಂದೆ ಕೆಲವು ಕನ್ನಡ ಕಲ್ಬರಹಗಳಲ್ಲಿ ಈ ಒರೆ ಬಳಕೆಯಾಗಿದೆ, ಇದರ ಹುರುಳು ಗುಡಿ ಇಲ್ಲ ದೇವಸ್ಥಾನ. ಹೊತ್ತಗೆಯಲ್ಲಿ ಈ ಒರೆ ಬಳಕೆಯಾಗಿರುವ ಹಾಳೆಬದಿಯ ತಿಟ್ಟ ಇಲ್ಲಿದೆ :- 


ಹೀಗೆ ಈ ಹೊತ್ತಗೆ ನೋಡಿದರೆ ಹಲವು ಹಲವು ಕನ್ನಡದ್ದೇ ಒರೆಗಳು ದೊರೆಯುತ್ತವೆ ಮತ್ತು ಹೊತ್ತಗೆ ಕೊನೆಯಲ್ಲಿ ಒರೆಪಟ್ಟಿ ಕೂಡ ನೀಡಲಾಗಿದೆ. ಇಲ್ಲು ಕೂಡ ಹಲವು ಕನ್ನಡದ್ದೇ ಒರೆಗಳು ಸಿಗುತ್ತವೆ, ಕೆಲವು ಎತ್ತುಗೆಗಳು :-

ಅಱಂ (ಧರ್ಮ)
ಉಸಿರಿ (ಪ್ರಾಣಿ) 
ಎಣೆ (ಸಮ) 
ಎಸಕಂ (ಕೆಲಸ)
ಒಣರ್ (ಭಾವಿಸು)
ಕಾಣ್ಕೆ (ದರ್ಶನ)
ನೀರುಸಿರಿ (ನೀರು ಪ್ರಾಣಿ) 
ಪೂಣ್ (ಪ್ರತಿಜ್ಞೆಮಾಡಿ (ಕೈಗೊಳ್ಳು))
ಪೊೞ್ತು(ಳ್ತು) (ಹೊತ್ತು, ನೇಸರು)
ಬೇಳ್‍ಕಟ್ಟೆ (ಹೋಮಕುಂಡ) 
ಮಸಗು (ಕೆರಳು, ಉಕ್ಕು) 
ಮಾಱಾ(ರಾ)ಡು (ಅದಲು ಬದಲು ಮಾಡು)

ಈ ಹೊತ್ತಗೆಯನ್ನು ಇಲ್ಲಿಂದ ಇಳಿಸಿಕೊಳ್ಳಬಹುದು :- https://archive.org/details/anthigone0000soph