ಗುರುವಾರ, ಜುಲೈ 25, 2024

ಕನ್ನಡದ್ದೇ ಬೇರು ಪದಗಳ ಹೊತ್ತಗೆ

ಕನ್ನಡದ್ದೇ ಪದಗಳ ಕುರಿತಿ ಹಲವು ಸಲ ಹಲವರಿಂದ ಕೇಳಿರಬಹುದು. ಈ ಎಲ್ಲ ಕನ್ನಡದ್ದೇ ಬೇರಿನ ಒರೆಗಳ ಒಂದು ಪಟ್ಟಿ ಇಲ್ಲ ಹೊತ್ತಗೆಯಿದ್ದರೆ ಚೆನ್ನಾಗಿರುತ್ತದೆ ಎಂಬ ಅನಿಸಿಕೆ ಕೂಡ ನಿಮ್ಮಲ್ಲಿ ಇರಬಹುದು. ಹಿಂದೆಯೇ ಅಂದರೆ ೧೮೯೯ ರಲ್ಲೇ ರಾವಸಾಹೇಬ ಪಾಂಡುರಂಗ ವೆಂಕಟೇಶ ಚಿಂತಾಮಣಿಪೇಠಕರ ಅವರ "A Manual of Sanskrit and Kanarese Roots" ಓದುಗೆ ಬಿಡುಗಡೆ ಆಗಿತ್ತು. ಓದುಗೆ ಮೊದಲಲ್ಲಿ ಸಂಸ್ಕ್ರುತ ಬೇರುಗಳನ್ನು ತಿಳಿಸುತ್ತದೆ ಮತ್ತು ಅದಾದ ಮೇಲೆ ಕನ್ನಡದ್ದೇ ಬೇರುಗಳನ್ನು ತಿಳಿಸುತ್ತದೆ. ಹೊತ್ತಗೆಯಿಂದ ಒಂದು ಹಾಳೆಬದಿ ತಿಟ್ಟ ಇಲ್ಲಿದೆ :- 


ಈ ಓದುಗೆಯನ್ನು ಕನ್ನಡದ್ದೇ ಬೇರುಗಳು ಇಂದ ಇಳಿಸಿಕೊಳ್ಳಬಹುದು. 

ಮಂಗಳವಾರ, ಜುಲೈ 9, 2024

ಕಾದಲ್, ತಕ್ಕಾಳಿ ಕನ್ನಡದ್ದೇ ಒರೆಗಳು

ಈ ಮೇಲಿನ ಎರಡು ಒರೆಗಳನ್ನು ಕೇಳಿದ ಕೂಡಲೇ ಇವು ಕನ್ನಡದಲ್ಲ ಎಂಬ ಅನಿಸಿಕೆ ಮೂಡಬಹುದು ಆದರೆ ಬೆರಗು ಏನೆಂದರೆ ಇವು ಕನ್ನಡದ್ದೇ ಒರೆಗಳು. ಕನ್ನಡ ನುಡಿ ಹಿನ್ನಡವಳಿ ಹಾಗಿದೆ, ಈ ಮೇಲಿನ ಎರಡು ಒರೆಗಳಲ್ಲದೆ ಹಲವು ಕನ್ನಡದ್ದೇ ಒರೆಗಳು ಬಳಕೆಯಿಂದ ಬಿದ್ದುಹೋಗಿವೆ, ಆದರೆ ಈಗಲೂ ಕನ್ನಡದ್ದೇ ಒರೆಗಳನ್ನು ನಾವು ಅರಿತು ಮತ್ತೆ ಬಳಸಬಹುದು.

ತಕ್ಕಾಳಿ ಒರೆಗೆ ಬರೋಣ, ಇದರ ಹುರುಳು ಟೊಮ್ಯಾಟೊ. ಈ ಒರೆ ನಿಮಗೆ ಕನ್ನಡ ಸಾಹಿತ್ಯ ಪರಿಶತ್ತಿನ "ಕನ್ನಡ ನಿಘಂಟು" (ಮೂರನೆ ಕಂತು) ಹೊತ್ತಗೆಯಲ್ಲಿ ಹುರುಳು ಮತ್ತು ಬಳಕೆ ಜೊತೆ ಸಿಗುತ್ತದೆ, ಇದರ ತಿಟ್ಟ ಇಲ್ಲಿದೆ :- 


ಕನ್ನಡ ಸಾಹಿತ್ಯ ಪರಿಷತ್ತಿನ "ಕನ್ನಡ ನಿಘಂಟು" ಹೊತ್ತಗೆಯಲ್ಲದೆ ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೪ ಸಂಪುಟಗಳು)" ಹೊತ್ತಗೆಯಲ್ಲು ಇದೆ. ಕೊಂಡಿ ಇಲ್ಲಿದೆ :- ತಕ್ಕಾಳಿ 

ಇನ್ನೂ ಕಾದಲ್ ಒರೆಗೆ ಬರೋಣ, ಇದರ ಹುರುಳು ಒಲವು, ಪ್ರೀತಿ. ಇದು ಕೂಡ ಕನ್ನಡ ಸಾಹಿತ್ಯ ಪರಿಶತ್ತಿನ "ಕನ್ನಡ ನಿಘಂಟು" (ಎರಡನೆ ಕಂತು) ಹೊತ್ತಗೆಯಲ್ಲಿ ಹುರುಳು ಮತ್ತು ಬಳಕೆ ಜೊತೆಗಿದೆ, ಇದರ ತಿಟ್ಟ ಇಲ್ಲಿದೆ :- 


ಕಾದಲ್ ಒರೆ ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೪ ಸಂಪುಟಗಳು)" ಹೊತ್ತಗೆಯಲ್ಲು ಇದೆ. ಕೊಂಡಿ ಇಲ್ಲಿದೆ :- ಕಾದಲ್

ಒಟ್ಟಿನಲ್ಲಿ ಕನ್ನಡ ನುಡಿಯಲ್ಲಿ ಹೀಗೆ ಹಲವು ಬೆರಗುಗಳಿವೆ !!

ಗುರುವಾರ, ಮೇ 16, 2024

ಹಳಗನ್ನಡ ಅರ್ಥಕೋಶ

ಕನ್ನಡ ನುಡಿಯ ಹಿನ್ನಡವಳಿಯಲ್ಲಿ ಹಲವು ಹಲವು ಕನ್ನಡದ್ದೇ ಒರೆಗಳು ದೊರೆಯುತ್ತವೆ. ಈ ಹೊತ್ತಿನಲ್ಲಿ ಕೆಲವು ಬಳಕೆಯಿಂದ ಬಿದ್ದು ಹೋಗಿರಬಹುದು. ಇಂತಹ ಹೊತ್ತಗೆಗಳ ನೆರವಿನಿಂದ ಅವುಗಳ ಕುರಿತು ತಿಳಿದುಕೊಳ್ಳಬಹುದು. 

ಹಳಗನ್ನಡ ಅರ್ಥಕೋಶ ಹೊತ್ತಗೆಯಿಂದ ಕೆಲವು ಕನ್ನಡದ್ದೇ ಒರೆಗಳ ಪಟ್ಟಿಯಿಲ್ಲಿದೆ :- 

೧. ಅಟ್ಟಟ್ಟಿ - ದೂತ, ಓಲೆಕಾರ

೨. ಅಡಕಿಲ್ - ರಾಶಿ

೩. ಅಱಿ(ರಿ)ಲ್ - ನಕ್ಷತ್ರ

೪. ಅರ್ಬಿ - ಜಲಪಾತ

೫. ಅಲ್ಲರ - ವಿರಹ

೬. ಆಗಡು - ಆ ಸಮಯ

೭. ಆಱ(ರ)ಡಿ - ಲೂಟಿ, ದುಂಬಿ

೮. ಇಂಬು - ಆಶ್ರಯ, ಅವಕಾಶ

೯. ಈರಯ್ದು - ಹತ್ತು 

೧೦. ಉಕ್ಕೆವ - ಮೋಸ

೧೧. ಉಬ್ಬುಗೊಬ್ಬು - ಅಧಿಕ ಗರ್ವ

೧೨. ಎಕ್ಕಸಕ್ಕ - ಅಸಂಬದ್ಧ ಮಾತು

೧೩. ಎಣೆ - ಸಾಟಿ, ಸಮ

೧೩. ಎಸಕ - ಕೆಲಸ, ವ್ಯವಹಾರ

೧೪. ಒಣರ್ - ಭಾವಿಸು

೧೫. ಕಡುಪಗಲ್ - ಮಧ್ಯಾಹ್ನ

೧೬. ಕಾದಲ್ - ಪ್ರೀತಿ 

೧೭. ಕಿಸುವೊನ್ - ತಾಮ್ರ

೧೮. ಗೆಲ್ಲವೆಣ್ - ಜಯಲಕ್ಷ್ಮೀ

೧೯. ಚೆಂಬಿಸಿಲ - ನೇಸರ

೨೦. ಜಾಡು - ಗುರುತು, ಸುಳಿವು

೨೧. ಜೇನುಣಿ - ಜೇನು ನೊಣ

೨೨. ತುೞಿ(ಳಿ)ಲ್ - ನಮಸ್ಕಾರ

೨೩. ತೊರಳೆ - ಗುಲ್ಮ, spleen

೨೪. ದೂಸರ್ - ಕಾರಣ

೨೫. ನೋಂಪಿ - ವ್ರತ

೨೬. ಪೊೞ್ತು(ಳ್ತು) - ಹೊತ್ತು

೨೭. ಪೊೞ(ಳ)ಲ್ - ನಗರ, ಪ್ರತಿಧ್ವನಿ

೨೮. ಪೊೞೆ(ಳೆ) - ಹೊಳೆ, ನದಿ

೨೯. ಪೂಣ್ಕೆ - ಶಪಥ

೩೦. ಬಯ್ಗು - ಸಂಜೆ

೩೧. ಬಿದ್ದಿನ - ಅತಿಥಿ

೩೨. ಬೆಳಕಂಡಿ - ಕಿಟಿಕಿ

೩೩. ಮುನ್ನೀರ್ - ಸಮುದ್ರ

೩೪. ಮೇಲ್ಮೆ - ಘನತೆ

೩೫. ಸೊಡರು - ದೀಪ

೩೬. ಹೊರಜೆ - ಹಗ್ಗ

ಮಂಗಳವಾರ, ಮಾರ್ಚ್ 19, 2024

ಕನ್ನಡ ಪದಕಟ್ಟಣೆ - ಪಾಲ್ಗೊಳ್ಳುವಿಕೆ ಕುರಿತು

ಯಾವುದೇ ನುಡಿಯಾಗಲಿ ಅದಕ್ಕೆ ಪದಗಳೇ ತಿರುಳು. ಹೊಸ ಬೆಳವಣಿಗೆಗಳು, ಹೊಸದು ಕಂಡುಕೊಂಡಾಗ ಇಲ್ಲ ಕಂಡುಹಿಡಿದಾಗ ಆಗ ಅಲ್ಲಿ ಹೊಸ ಪದಗಳನ್ನು ಹಿಂದಿನಿಂದಲೂ ಕಟ್ಟುತ್ತಾ ಬಂದಿರುವುದು ನಾವು ನೋಡಿದ್ದೇವೆ. ಪದಕಟ್ಟಣೆ ನಿಲ್ಲದ ಕೆಲಸ, ಕನ್ನಡದಲ್ಲು ನಡೆದುಕೊಂಡು ಬಂದಿದೆ. ಕನ್ನಡ ಪದಕಟ್ಟಣೆಯಲ್ಲಿ ಎಲ್ಲ ಕನ್ನಡಿಗರು ಪಾಲ್ಗೊಳ್ಳಬಹುದು, ಅದರ ಸುತ್ತಲೂ ಕೆಲವು ಮಾತುಗಳು ಈ ಬರಹದಲ್ಲಿ. 

ಮೊದಲನೆ ಹೆಜ್ಜೆ ಏನೆಂದರೆ ಕನ್ನಡ ಪದಕಟ್ಟಣೆಗೆ ನಾನು ಬಳಸುತ್ತಿರುವ ಪದ ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳುವುದಕ್ಕೆ ಈ ಕೆಳಗಿನ ಹೊತ್ತಗೆಗಳು ನೆರವು ನೀಡುತ್ತವೆ :- 

೧. ಅಚ್ಚಗನ್ನಡ ನುಡಿಕೋಶ (ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು ) 

ಈ ಹೊತ್ತಗೆಯನ್ನು https://harivubooks.com/products/acchagannadada-nudikosha ಇಂದ ಕೊಳ್ಳಬಹುದು ಇಲ್ಲ ಯಾವಾಗಲೂ ನನ್ನ ಚೂಟಿಯುಲಿಯಲ್ಲಿ (Smart Phone) ನೋಡುವ ಬಯಕೆಯಿದ್ದರೆ https://mylang.in/products/achchagannada-nudikosha-inr ಇಂದ ಕೊಳ್ಳಬಹುದು.

೨. ದ್ರಾವಿಡಭಾಷಾ ಜ್ಞಾತಿಪದಕೋಶ (ಕನ್ನಡ ಸಾಹಿತ್ಯ ಪರಿಷತ್ತು)

ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಜೊತೆಗೆ ದ್ರಾವಿಡ ನುಡಿಗಳಾದ ತಮಿಳು, ತೆಲುಗು, ತುಳು, ಕೊಡವ ನುಡಿ ಸಾಟಿಯೊರೆಗಳು ಕೂಡ ನೀಡಲಾಗಿದೆ. 

೩. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೪ ಸಂಪುಟಗಳು)" 

ಅ. ಈ ಹೊತ್ತಗೆಯು ಇಲ್ಲಿಂದ ಇಳಿಸಿಕೊಳ್ಳಬಹುದು :- 

ಮೊದಲ ಕಂತು :- https://archive.org/details/kannada-dict-vol-1

ಎರಡನೆ ಕಂತು :- https://archive.org/details/Kannada_dict_Vol2

ಮೂರನೆ ಕಂತು :- https://archive.org/details/Kannada_dict_Vol3

ನಾಲ್ಕನೆ ಕಂತು :- https://archive.org/details/Kannada_dict_Vol4 

ಕನ್ನಡದ್ದೇ ಒರೆ(ಪದ)ಯಾಗಿದ್ದರೆ ಅದು ದಪ್ಪವಾಗಿ ಅಚ್ಚಾಗಿರುತ್ತದೆ, ಎರವಲು ಆಗಿದ್ದರೆ ಅದು ಸಣ್ಣದಾಗಿ ಅಚ್ಚಾಗಿರುತ್ತದೆ. 

ಆ. ಈ ಪದನೆರಕೆ ಮಿಂಬಲೆಯಲ್ಲು ಇದೆ. ಅದರ ಕೊಂಡಿ :- https://dsal.uchicago.edu/dictionaries/kittel/

ಆದರೆ ಇಲ್ಲಿ ಹುಡುಕಿದರೆ ಯಾವುದೇ ಪದವಾದರು, ಅದು ಕನ್ನಡದ್ದೇ ಒರೆ ಎಂದು ನೇರವಾಗಿ ತಿಳಿಯುವುದಿಲ್ಲ. ತಿಳಿದುಕೊಳ್ಳಲು ಹೇಗೆ ಎಂದು ಒಂದು ಎತ್ತುಗೆ ನೀಡುವೆ, ಈಗ "ಸೊಡರು" ಒರೆ ಹುಡುಕೋಣ, ಹಲವು ದೊರೆತಗಳು ಬರುತ್ತವೆ. ಅದರಲ್ಲಿ "ಸೊಡರು" ಪದ ಎಡಗಡೆ ಬಂದಿರುವ ದೊರೆತಗಳ ಕಡೆ ಗಮನ ನೀಡೋಣ, ಈ ಎತ್ತುಗೆಯಲ್ಲಿ ಸೊಡರು ತೆಗೆದುಕೊಂಡಿರುವುದರಿಂದ ಎಡಗಡೆ ಸೊಡರು ಬಂದದಿರುವ ದೊರೆತಗಳನ್ನು ನೋಡೋಣ.







ಈಗ ಪದದ ಬಲಬದಿಯಲ್ಲೇ ಹಾಳೆಬದಿ(ಪುಟ) ಎಣಿ(ಸಂಖ್ಯೆ) ಕಾಣುತ್ತದೆ, ಈ ಎತ್ತುಗೆಯಲ್ಲಿ ಅದು 1671, ಅದನ್ನು ಒತ್ತೋಣ ಆಗ ಈ ಮಿಂಪುಟ ತೆರೆದುಕೊಳ್ಳುತ್ತದೆ, ಮಿಂಪುಟದ ಮೇಲ್ಬದಿ ಇಲ್ಲಿದೆ ಯಾಕೆಂದರೆ ಮುಂದಿನ ಹೆಜ್ಜೆಗೆ ಅದೇ ಸಾಕು 






ಈ ಮೇಲಿನ ತಿಟ್ಟದಲ್ಲಿ "click for page image" ಒತ್ತಿದರೆ ಪದನೆರಕೆ ಆ ಹಾಳೆಬದಿ(ಪುಟ) ತೆರೆದುಕೊಳ್ಳುತ್ತದೆ, ಅದರಲ್ಲಿ ಪದ ದೊಡ್ಡದಾಗಿ ಕಂಡರೆ ಅದು ಕನ್ನಡದ್ದೇ ಒರೆ, "ಸೊಡರು" ಎತ್ತುಗೆಯಲ್ಲಿ ಅದು ದೊಡ್ಡದಾಗಿ ಕಾಣುತ್ತದೆ, ಹಾಗಾಗಿ ಅದು ಕನ್ನಡದ್ದೇ ಒರೆ. 



೪. Dravidian Etymlogical Dictionary : https://dsal.uchicago.edu/dictionaries/burrow/ 

ಇದರಲ್ಲಿ "ka." ಮುಂದೆ ಇರುವುದು ಎಲ್ಲವು ಕನ್ನಡದ್ದೇ ಒರೆಗಳು ಆದರೆ ಇಂಗ್ಲಿಶ್ ಬರಿಗೆಗಳ ನೆರವಿನಿಂದ ಹುಡುಕಬೇಕು. 

೫. ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು) (೮ ಸಂಪುಟಗಳು)

ಇದು ಎಂಟು ಕಂತಿನ ಪದನೆರಕೆ, ಇಲ್ಲಿ ಎಲ್ಲ ಒರೆಗಳ ಹುರುಳು, ತಿಳಿವು ಜೊತೆ ಅದು ಎಲ್ಲಿ ಬಳಕೆಯಾಗಿತ್ತೆಂದು ತಿಳಿಸುತ್ತದೆ. ಒರೆಯ ಕೊನೆಯಲ್ಲಿ ಇದು ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳಬಹುದು, "ದೇ" ಎಂದು ಕಂಡರೆ ಅದು ಕನ್ನಡದ್ದೇ ಒರೆ, ಒಂದು ಎತ್ತುಗೆ ಕೆಳಗಿನ ತಿಟ್ಟದಲ್ಲಿದೆ :- 



ಕನ್ನಡ ಪದಕಟ್ಟಣೆಯಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸುವುದಕ್ಕೆ ಮೇಲಿನ ಹೊತ್ತಗೆಗಳ ನೆರವು ಪಡೆದ ಮೇಲೆ ಈ ಬರಹದಲ್ಲಿ (https://nesaranagu.blogspot.com/2023/08/blog-post_28.html) ನೀಡಿರುವ ಹಲವು ಹೊತ್ತಗೆಗಳ ನೆರವು ಪಡೆಯಬಹುದು. ಅದರಲ್ಲಿ "ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ" ಹೊತ್ತಗೆ ತುಂಬಾ ನೆರವು ನೀಡುತ್ತದೆ ಎನ್ನುವುದು ನನ್ನ ಅನಿಸಿಕೆ. ಹೀಗೆ ಹೆಚ್ಚೆಚ್ಚು ಕನ್ನಡ ಪದ ಕಟ್ಟೋಣ. ಕನ್ನಡ ನಾಳೆಗಳನ್ನು ಕಟ್ಟೋಣ.

ಶನಿವಾರ, ಜನವರಿ 6, 2024

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಹೊತ್ತಗೆಗಳ ಓದು

ಕನ್ನಡ ನುಡಿಯರಿಮೆ, ಸೊಲ್ಲರಿಮೆ ಸಲುವಾಗಿ ಹಲವು ಹೊತ್ತಗೆಗಳನ್ನು ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರು ಬರೆದಿದ್ದಾರೆ. ಅವರ ಹೊತ್ತಗೆಗಳನ್ನು ಯಾವ ಓರಣದಲ್ಲಿ ಓದಬೇಕೆಂಬ ಕೇಳ್ವಿ ಆಗಾಗ ಮೂಡುತ್ತದೆ, ಅದರ ಸಲುವಾಗಿ ಈ ಬರಹ ಬರೆಯುತ್ತಿದ್ದೇನೆ. ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹಲವು ಹೊತ್ತಗೆಗಳನ್ನು ಹಲವು ಓರಣ(ಕ್ರಮ)ಗಳಲ್ಲಿ ಓದಬಹುದು, ಅದರಲ್ಲಿ ಒಂದು ಓರಣ ಈ ಬರಹದಲ್ಲಿ ತಿಳಿಸಲಾಗುವುದು. 

ಹಿರಿಯರ ಬಗ್ಗೆ ಇತ್ತೀಚಗಶ್ಟೇ ಗೊತ್ತಾಗಿದೆ, ಎಲ್ಲಿಂದ ತೊಡಗುವುದೆಂದು ಕೇಳ್ವಿ ಮೂಡುವುದು ಸರಿ. 

ಮೊದಲ ಹೆಜ್ಜೆಗಳಿಗೆ ಈ ಹೊತ್ತಗೆಗಳನ್ನು ಓದಬಹುದು :- 

೧. ಭಾಷೆಯ ಬಗೆಗೆ ನೀವೇನು ಬಲ್ಲಿರಿ ? 

೨. ಕನ್ನಡ ನುಡಿಯರಿಮೆಯ ಇಣುಕುನೋಟ

೩. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

೪. ಮಾತಿನ ಒಳಗುಟ್ಟು

೫. ಮಾತು ಮತ್ತು ಬರಹದ ನಡುವಿನ ಗೊಂದಲ

ಮೇಲಿನ ಹೊತ್ತಗೆಗಳನ್ನು ಓದಿದ ಮೇಲೆ ಪದಕಟ್ಟಣೆಯಲ್ಲಿ ಮುಂದುವರೆಯಲು ಬಯಸಿದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

ಪದಕಟ್ಟಣೆ ಜೊತೆ ಕನ್ನಡದ್ದೇ ಪದಗಳು ತಿಳಿದುಕೊಳ್ಳವ ಹಂಬಲವಿದ್ದರೆ ಈ ಕೆಳಗಿನ ಹೊತ್ತಗೆಗಳನ್ನು ಬಳಸಬಹುದು :-

೭. ಇಂಗ್ಲಿಶ್-ಕನ್ನಡ ಪದನೆರಕೆ

೮. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು 

ಸೊಲ್ಲರಿಮೆ(ವ್ಯಾಕರಣ) ಕವಲಿನಲ್ಲಿ ಮುಂದುವರೆಯಲು ಬಯಸಿದರೆ ಈ ಹೊತ್ತಗೆಗಳನ್ನು ಓದಬಹುದು :- 

೬. ಕನ್ನಡ ವ್ಯಾಕರಣ ಯಾಕೆ ಬೇಕು ?

೭. ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ

೮. ಕನ್ನಡ ಬರಹದ ಸೊಲ್ಲರಿಮೆ - ೧

೯. ಕನ್ನಡ ಬರಹದ ಸೊಲ್ಲರಿಮೆ - ೨

೧೦. ಕನ್ನಡ ಬರಹದ ಸೊಲ್ಲರಿಮೆ - ೩

೧೧. ಕನ್ನಡ ಬರಹದ ಸೊಲ್ಲರಿಮೆ - ೪

೧೨. ಕನ್ನಡ ಬರಹದ ಸೊಲ್ಲರಿಮೆ - ೫

೧೩. ಕನ್ನಡ ಬರಹದ ಸೊಲ್ಲರಿಮೆ - ೬

೧೪. ಕನ್ನಡ ಬರಹದ ಸೊಲ್ಲರಿಮೆ - ೭

೧೫. ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು

ಹವ್ಯಕ ಕನ್ನಡ ಕುರಿತು ತಿಳಿದುಕೊಳ್ಳುವ ಬಯಕೆಯಿದ್ದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಹವ್ಯಕ ಕನ್ನಡ  

ಹಳೆಗನ್ನಡದಿಂದ ಈಗಿನ ಕನ್ನಡದ ತನಕ ನಡೆದಿರುವ ಮಾರ‍್ಪಾಟುಗಳ ಜೊತೆ ಹಳೆಗನ್ನಡ ಸೊಲ್ಲರಿಮೆ ಕುರಿತು ತಿಳಿದುಕೊಳ್ಳುವ ಹಂಬಲಕ್ಕೆ ಈ ಹೊತ್ತಗೆಗಳನ್ನು ಓದಬಹುದು :-

೬. ಕನ್ನಡ ನುಡಿ ನಡೆದು ಬಂದ ದಾರಿ

೭. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು ?

ಕನ್ನಡ ಬರಹಗಳಲ್ಲಿ ಕಾಣುವ ಬರಹದ ಗೊಂದಲಗಳು, ಪದಬಳಕೆ ಗೊಂದಲಗಳ ಕುರಿತು ಆಳವಾಗಿ ತಿಳಿದುಕೊಳ್ಳಲು ಬಯಸಿದರೆ ಈ ಹೊತ್ತಗೆ ಓದಬಹುದು :-

೬. ಕನ್ನಡ ಬರಹವನ್ನು ಸರಿಪಡಿಸೋಣ 

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹೊತ್ತಗೆಗಳನ್ನು ಇಲ್ಲಿಂದ ಕೊಳ್ಳಬಹುದು :- https://harivubooks.com/collections/dn-shankara-bhat-kannada-books