ಮಂಗಳವಾರ, ಮಾರ್ಚ್ 19, 2024

ಕನ್ನಡ ಪದಕಟ್ಟಣೆ - ಪಾಲ್ಗೊಳ್ಳುವಿಕೆ ಕುರಿತು

ಯಾವುದೇ ನುಡಿಯಾಗಲಿ ಅದಕ್ಕೆ ಪದಗಳೇ ತಿರುಳು. ಹೊಸ ಬೆಳವಣಿಗೆಗಳು, ಹೊಸದು ಕಂಡುಕೊಂಡಾಗ ಇಲ್ಲ ಕಂಡುಹಿಡಿದಾಗ ಆಗ ಅಲ್ಲಿ ಹೊಸ ಪದಗಳನ್ನು ಹಿಂದಿನಿಂದಲೂ ಕಟ್ಟುತ್ತಾ ಬಂದಿರುವುದು ನಾವು ನೋಡಿದ್ದೇವೆ. ಪದಕಟ್ಟಣೆ ನಿಲ್ಲದ ಕೆಲಸ, ಕನ್ನಡದಲ್ಲು ನಡೆದುಕೊಂಡು ಬಂದಿದೆ. ಕನ್ನಡ ಪದಕಟ್ಟಣೆಯಲ್ಲಿ ಎಲ್ಲ ಕನ್ನಡಿಗರು ಪಾಲ್ಗೊಳ್ಳಬಹುದು, ಅದರ ಸುತ್ತಲೂ ಕೆಲವು ಮಾತುಗಳು ಈ ಬರಹದಲ್ಲಿ. 

ಮೊದಲನೆ ಹೆಜ್ಜೆ ಏನೆಂದರೆ ಕನ್ನಡ ಪದಕಟ್ಟಣೆಗೆ ನಾನು ಬಳಸುತ್ತಿರುವ ಪದ ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳುವುದಕ್ಕೆ ಈ ಕೆಳಗಿನ ಹೊತ್ತಗೆಗಳು ನೆರವು ನೀಡುತ್ತವೆ:- 

೧. ಅಚ್ಚಗನ್ನಡ ನುಡಿಕೋಶ (ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು) 

ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಒರೆಗಳು. ಈ ಹೊತ್ತಗೆಯನ್ನು https://harivubooks.com/products/acchagannadada-nudikosha ಇಂದ ಕೊಳ್ಳಬಹುದು ಇಲ್ಲ ಯಾವಾಗಲೂ ನನ್ನ ಚೂಟಿಯುಲಿಯಲ್ಲಿ (Smart Phone) ನೋಡುವ ಬಯಕೆಯಿದ್ದರೆ https://mylang.in/products/achchagannada-nudikosha-inr ಇಂದ ಕೊಳ್ಳಬಹುದು.

೨. ದ್ರಾವಿಡಭಾಷಾ ಜ್ಞಾತಿಪದಕೋಶ (ಕನ್ನಡ ಸಾಹಿತ್ಯ ಪರಿಷತ್ತು)

ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಜೊತೆಗೆ ದ್ರಾವಿಡ ನುಡಿಗಳಾದ ತಮಿಳು, ತೆಲುಗು, ತುಳು, ಕೊಡವ ನುಡಿ ಸಾಟಿಯೊರೆಗಳು ಕೂಡ ನೀಡಲಾಗಿದೆ. ಈ ಹೊತ್ತಗೆಯನ್ನು  https://harivubooks.com/products/dravidabhaasha-jnaatipadakosha ಇಂದ ಕೊಳ್ಳಬಹುದು.

೩. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೪ ಸಂಪುಟಗಳು)" 

ಅ. ಈ ಹೊತ್ತಗೆಯು ಇಲ್ಲಿಂದ ಇಳಿಸಿಕೊಳ್ಳಬಹುದು :- 

ಮೊದಲ ಕಂತು :- https://archive.org/details/kannada-dict-vol-1

ಎರಡನೆ ಕಂತು :- https://archive.org/details/Kannada_dict_Vol2

ಮೂರನೆ ಕಂತು :- https://archive.org/details/Kannada_dict_Vol3

ನಾಲ್ಕನೆ ಕಂತು :- https://archive.org/details/Kannada_dict_Vol4 

ಕನ್ನಡದ್ದೇ ಒರೆ(ಪದ)ಯಾಗಿದ್ದರೆ ಅದು ದಪ್ಪವಾಗಿ ಅಚ್ಚಾಗಿರುತ್ತದೆ, ಎರವಲು ಆಗಿದ್ದರೆ ಅದು ಸಣ್ಣದಾಗಿ ಅಚ್ಚಾಗಿರುತ್ತದೆ. 

ಆ. ಈ ಪದನೆರಕೆ ಮಿಂಬಲೆಯಲ್ಲು ಇದೆ. ಅದರ ಕೊಂಡಿ :- https://dsal.uchicago.edu/dictionaries/kittel/

ಆದರೆ ಇಲ್ಲಿ ಹುಡುಕಿದರೆ ಯಾವುದೇ ಪದವಾದರು, ಅದು ಕನ್ನಡದ್ದೇ ಒರೆ ಎಂದು ನೇರವಾಗಿ ತಿಳಿಯುವುದಿಲ್ಲ. ತಿಳಿದುಕೊಳ್ಳಲು ಹೇಗೆ ಎಂದು ಒಂದು ಎತ್ತುಗೆ ನೀಡುವೆ, ಈಗ "ಸೊಡರು" ಒರೆ ಹುಡುಕೋಣ, ಹಲವು ದೊರೆತಗಳು ಬರುತ್ತವೆ. ಅದರಲ್ಲಿ "ಸೊಡರು" ಪದ ಎಡಗಡೆ ಬಂದಿರುವ ದೊರೆತಗಳ ಕಡೆ ಗಮನ ನೀಡೋಣ, ಈ ಎತ್ತುಗೆಯಲ್ಲಿ ಸೊಡರು ತೆಗೆದುಕೊಂಡಿರುವುದರಿಂದ ಎಡಗಡೆ ಸೊಡರು ಬಂದದಿರುವ ದೊರೆತಗಳನ್ನು ನೋಡೋಣ.







ಈಗ ಪದದ ಬಲಬದಿಯಲ್ಲೇ ಹಾಳೆಬದಿ(ಪುಟ) ಎಣಿ(ಸಂಖ್ಯೆ) ಕಾಣುತ್ತದೆ, ಈ ಎತ್ತುಗೆಯಲ್ಲಿ ಅದು 1671, ಅದನ್ನು ಒತ್ತೋಣ ಆಗ ಈ ಮಿಂಪುಟ ತೆರೆದುಕೊಳ್ಳುತ್ತದೆ, ಮಿಂಪುಟದ ಮೇಲ್ಬದಿ ಇಲ್ಲಿದೆ ಯಾಕೆಂದರೆ ಮುಂದಿನ ಹೆಜ್ಜೆಗೆ ಅದೇ ಸಾಕು.






ಈ ಮೇಲಿನ ತಿಟ್ಟದಲ್ಲಿ "click for page image" ಒತ್ತಿದರೆ ಪದನೆರಕೆ ಆ ಹಾಳೆಬದಿ(ಪುಟ) ತೆರೆದುಕೊಳ್ಳುತ್ತದೆ, ಅದರಲ್ಲಿ ಪದ ದೊಡ್ಡದಾಗಿ ಕಂಡರೆ ಅದು ಕನ್ನಡದ್ದೇ ಒರೆ, "ಸೊಡರು" ಎತ್ತುಗೆಯಲ್ಲಿ ಅದು ದೊಡ್ಡದಾಗಿ ಕಾಣುತ್ತದೆ, ಹಾಗಾಗಿ ಅದು ಕನ್ನಡದ್ದೇ ಒರೆ. 



೪. Dravidian Etymlogical Dictionary : https://dsal.uchicago.edu/dictionaries/burrow/ 

ಇದರಲ್ಲಿ "ka." ಮುಂದೆ ಇರುವುದು ಎಲ್ಲವು ಕನ್ನಡದ್ದೇ ಒರೆಗಳು ಆದರೆ ಇಂಗ್ಲಿಶ್ ಬರಿಗೆಗಳ ನೆರವಿನಿಂದ ಹುಡುಕಬೇಕು. 

೫. ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು) (೮ ಸಂಪುಟಗಳು)

ಇದು ಎಂಟು ಕಂತಿನ ಪದನೆರಕೆ, ಇಲ್ಲಿ ಎಲ್ಲ ಒರೆಗಳ ಹುರುಳು, ತಿಳಿವು ಜೊತೆ ಅದು ಎಲ್ಲಿ ಬಳಕೆಯಾಗಿತ್ತೆಂದು ತಿಳಿಸುತ್ತದೆ. ಒರೆಯ ಕೊನೆಯಲ್ಲಿ ಇದು ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳಬಹುದು, "ದೇ" ಎಂದು ಕಂಡರೆ ಅದು ಕನ್ನಡದ್ದೇ ಒರೆ, ಒಂದು ಎತ್ತುಗೆ ಕೆಳಗಿನ ತಿಟ್ಟದಲ್ಲಿದೆ :- 


ಕನ್ನಡ ಪದಕಟ್ಟಣೆಯಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸುವುದಕ್ಕೆ ಮೇಲಿನ ಹೊತ್ತಗೆಗಳ ನೆರವು ಪಡೆದ ಮೇಲೆ ಈ ಬರಹದಲ್ಲಿ (https://nesaranagu.blogspot.com/2023/08/blog-post_28.html) ನೀಡಿರುವ ಹಲವು ಹೊತ್ತಗೆಗಳ ನೆರವು ಪಡೆಯಬಹುದು. ಅದರಲ್ಲಿ "ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ" ಹೊತ್ತಗೆ ತುಂಬಾ ನೆರವು ನೀಡುತ್ತದೆ ಎನ್ನುವುದು ನನ್ನ ಅನಿಸಿಕೆ. ಹೀಗೆ ಹೆಚ್ಚೆಚ್ಚು ಕನ್ನಡ ಪದ ಕಟ್ಟೋಣ. ಕನ್ನಡ ನಾಳೆಗಳನ್ನು ಕಟ್ಟೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ